LATEST NEWS
ಕೇರಳಿಗರಿಗೆ ದಕ್ಷಿಣಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ…..?

ಮಂಗಳೂರು ಸೆಪ್ಟೆಂಬರ್ 09: ಕೇರಳದಲ್ಲಿ ಕೊರೊನಾ ಹಾಗೂ ನಿಫಾ ವೈರಸ್ ಹಾವಳಿ ಹೆಚ್ಚಾಗಿರುವ ಹಿನ್ನಲೆ ಕೇರಳದಿಂದ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸುವವರು ಹಾಗೂ ತೆರಳುವವರಿಗೆ ಎರಡು ತಿಂಗಳ ಕಾಲ ನಿರ್ಬಂಧ ವಿಧಿಸಲು ದಕ್ಷಿಣಕನ್ನಡ ಜಿಲ್ಲಾಡಳಿತ ಮುಂದಾಗಿದ್ದು, ಈ ಬಗ್ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಂದಿನ ಎರಡು ತಿಂಗಳ ಕಾಲ ಸಂಚಾರ ನಿರ್ಬಂಧಿಸಲು ಸಲಹೆ ನೀಡಿದ್ದಾರೆ. ಈಗಾಗಲೇ ರಾಜ್ಯ ಸರಕಾರ ಈ ಕುರಿತಂತೆ ಆದೇಶ ಹೊರಡಿಸಿದೆ.
ದ.ಕ.ಜಿಲ್ಲೆಗೆ ಪ್ಯಾರಾ ಮೆಡಿಕಲ್, ನರ್ಸಿಂಗ್ ಶಿಕ್ಷಣಕ್ಕಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳು ಅಕ್ಟೋಬರ್ ಅಂತ್ಯದವರೆಗೆ ಮಂಗಳೂರಿಗೆ ಬರುವಂತಿಲ್ಲ. ಈ ಬಗ್ಗೆ ಈಗಾಗಲೇ ಕೇರಳದಲ್ಲಿದ್ದವರಿಗೆ ಆಯಾ ಶಿಕ್ಷಣ ಸಂಸ್ಥೆಗಳು ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಜಿಲ್ಲೆಯಿಂದ ಕೇರಳಕ್ಕೆ ತೆರಳುವ ಉದ್ದೇಶ ಇರುವವರೂ ತಮ್ಮ ಪ್ರಯಾಣವನ್ನು ಅಕ್ಟೋಬರ್ ಅಂತ್ಯದವರೆಗೆ ಮುಂದೂಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು, ಕಚೇರಿಗಳು, ಹೊಟೇಲ್ ಗಳು, ಕೈಗಾರಿಕೆಗಳು ಇತ್ಯಾದಿಯಲ್ಲಿ ಕೆಲಸಕ್ಕಿರುವವರು ಕೂಡಾ ಎರಡು ತಿಂಗಳ ಕಾಲ ಅವರು ಕೇರಳದಿಂದ ಜಿಲ್ಲೆಗೆ ಬರುವಂತಿಲ್ಲ. ಅವರ ಉದ್ಯೋಗದಾತರು ಕೂಡಾ ಕೇರಳ ಮೂಲದ ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಕರ್ನಾಟಕ ಪ್ರವೇಶಿಸಲು ಅನುವು ಮಾಡಿಕೊಡಬಾರದು. ಅಲ್ಲದೆ, ಕೇರಳಕ್ಕೆ ಪ್ರಯಾಣಿಸದಂತೆ ನಿರ್ಬಂಧ ವಿಧಿಸಲು ಕೈಗಾರಿಕೆ ಇನ್ನಿತರ ಕಂಪನಿಗಳ ಮಾಲಿಕರಿಗೆ ಸೂಚಿಸಿದ್ದಾರೆ. ಅದೇ ರೀತಿ, ಸಾರ್ವಜನಿಕರು ಯಾವುದೇ ತುರ್ತು ಕಾರಣಗಳಿಲ್ಲದೇ ಇದ್ದಲ್ಲಿ ಅಕ್ಟೋಬರ್ ಅಂತ್ಯದ ವರೆಗೆ ಕೇರಳ ರಾಜ್ಯಕ್ಕೆ ಪ್ರಯಾಣಿಸಕೂಡದು ಎಂದು ತಮ್ಮ ಸಲಹೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.