KARNATAKA
ಕೇರಳ – ನರ್ಸಿಂಗ್ ವಿಧ್ಯಾರ್ಥಿನಿ ಅಮ್ಮು ಸಜೀವ್ ಸಾವಿನ ಪ್ರಕರಣ – ಮೂವರು ವಿಧ್ಯಾರ್ಥಿನಿಯರು ಅರೆಸ್ಟ್
ಕೇರಳ ನವೆಂಬರ್ 22: ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೋಬ್ಬಳು ಹಾಸ್ಟೆಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ಪತ್ತನಂತಟ್ಟದಲ್ಲಿ ನಡೆದಿದ್ದು ಘಟನೆ ಸಬಂಧ ಮೂವರು ಸಹಪಾಠಿ ವಿದ್ಯಾರ್ಥಿನಿಯರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಅಮ್ಮು ಸಜೀವ್ (21)ಮೃತ ವಿದ್ಯಾರ್ಥಿನಿಯಾಗಿದ್ದುಸಹಪಾಠಿಗಳ ಪ್ರಚೋದನೆಯೇ ಅಮ್ಮು ಜೀವಾಂತ್ಯಕ್ಕೆ ಕಾರಣ ಎನ್ನಲಾಗಿದೆ. ಪಠಾಣಪುರಂ ನಿವಾಸಿ ಅಲೀನಾ, ಚಂಗನಾಶ್ಶೇರಿ ನಿವಾಸಿ ಅಕ್ಷಿತಾ ಮತ್ತು ಕೊಟ್ಟಾಯಂ ನಿವಾಸಿ ಅಂಜನಾ ಬಂಧಿತ ವಿದ್ಯಾರ್ಥಿನಿಯರಾಗಿದ್ದಾರೆ. ಪತ್ತನಂತಿಟ್ಟ ಎಸ್‌ಎಂಇ ನರ್ಸಿಂಗ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಹಾಗೂ ತಿರುವನಂತಪುರದ ಐರೂರ್‌ಪಾರ ರಾಮಪುರತುಪೊಯ್ಕಾ ಶಿವಂ ಮನೆಯ ಸಜೀವ್ ಮತ್ತು ರಾಧಾಮಣಿ ದಂಪತಿಯ ಪುತ್ರಿ ಅಮ್ಮು, ಶುಕ್ರವಾರ (ನ.15) ಹಾಸ್ಟೆಲ್ ಕಟ್ಟಡದಿಂದ ಹಾರಿ ಜೀವಾಂತ್ಯ ಮಾಡಿಕೊಂಡಿದ್ದರು.
ಅಮ್ಮು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದು, ಸಹಪಾಠಿಗಳ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದರು. ಈ ಹಿಂದೆಯು ಸಹಪಾಠಿಗಳ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದರು. ಅಮ್ಮು ಮಾನಸಿಕವಾಗಿ ಕುಗ್ಗಲು ಅವರೇ ಕಾರಣ ಎಂದು ಮನೆಯವರು ಹೇಳಿದ್ದು, ವಿದ್ಯಾರ್ಥಿನಿಯರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಸದ್ಯ ಸಹಪಾಠಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಲು ಕೇವಲ ಒಂದೇ ಒಂದು ತಿಂಗಳು ಬಾಕಿ ಇರುವ ಹೊತ್ತಿಗೆ ಸಾವಿಗೆ ಶರಣಾಗುವ ಮೂಲಕ ತನ್ನ ಆಸೆ, ಕನಸ್ಸುಗಳನ್ನು ಅಮ್ಮು ನುಚ್ಚನೂರು ಮಾಡಿ, ಹೆತ್ತವರು ಮತ್ತು ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.