LATEST NEWS
ಸಾರಡ್ಕ ಸೇರಿ ನಾಲ್ಕು ಗಡಿಗಳನ್ನು ಮುಕ್ತಗೊಳಿಸಲು ಕೇರಳ ಹೈಕೋರ್ಟ್ ಆದೇಶ
ಕಾಸರಗೋಡು ಅಗಸ್ಟ್ 26: ಕೇಂದ್ರ ಸರಕಾರದ ಆದೇಶ ಇದ್ದರೂ ಗಡಿ ತೆರೆಯದೆ ಉದ್ದಟತನ ತೋರಿದ್ದ ಕಾಸರಗೋಡು ಜಿಲ್ಲಾಧಿಕಾರಿಗೆ ಕೇರಳ ಹೈಕೋರ್ಟ್ ನಲ್ಲಿ ಮುಖಭಂಗವಾಗಿದೆ. ಕೇರಳ-ಕರ್ನಾಟಕ ಅಂತಾರಾಜ್ಯ ಪ್ರಮುಖ ನಾಲ್ಕು ರಸ್ತೆಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.
ಕೊರೊನಾ ಹಿನ್ನಲೆ ದಕ್ಷಿಣ ಕನ್ನಡ- ಕಾಸರಗೋಡು ನಡುವಿನ 14ಕ್ಕೂ ಅಧಿಕ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಉಭಯ ಜಿಲ್ಲೆಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು. ಈ ನಡುವೆ ಕೇಂದ್ರ ಸರಕಾರ ಅನಲಾಕ್ ಮಾರ್ಗಸೂಚಿ 3.0 ಪ್ರಕಾರ ಜನ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು ಎಂದು ಆದೇಶಿಸಿದರು. ಕೇರಳ ಸರಕಾರ ಮಾತ್ರ ರಸ್ತೆ ಸಂಚಾರ ಬಂದ್ ಮಾಡಿತ್ತು. ಈ ಹಿನ್ನಲೆ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಕೇರಳ ಹೈಕೋರ್ಟ್ ಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.
ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕೇರಳ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ ಮತ್ತು ಸಾರಡ್ಕ ರಸ್ತೆಗಳನ್ನು ತೆರವುಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.