LATEST NEWS
ಕೇರಳ ಕೊಚ್ಚಿಯಲ್ಲಿ ಮೇಘ ಸ್ಪೋಟ – ಮುಂಗಾರು ಪೂರ್ವ ಮಳೆಗೆ ಕೇರಳದಲ್ಲಿ ಪ್ರವಾಹ
ಕೇರಳ ಮೇ 29: ಕೇರಳದಲ್ಲಿ ಮಂಗಳವಾರವೂ ಮುಂಗಾರು ಪೂರ್ವ ಮಳೆ ತನ್ನ ಆರ್ಭಟ ಮುಂದುವರೆಸಿದೆ. ಮಳೆ ಸಂಬಂಧಿ ಅನಾಹುತಕ್ಕೆ ಓರ್ವ ಮೀನುಗಾರ ಮೃತಪಟ್ಟಿದ್ದಾನೆ. ಜೊತೆಗೆ ಮಧ್ಯ ಕೇರಳದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೋಟಯಂ ಜಿಲ್ಲೆಯ ಭರಣಂಙಾನಂ ಬಳಿ ಭೂಕುಸಿತ ಸಂಭವಿಸಿದೆ. ಆದರೆ ಜೀವಹಾನಿ ವರದಿಯಾಗಿಲ್ಲ. ಇಲ್ಲಿ ಹಲವು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ.
ತಿರುವನಂತಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾಸರಗೋಡು, ಆಲಪ್ಪುಳ, ಎರ್ನಾಕುಳಂ ಮತ್ತು ಕೋಟಯಂ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಳೆದ ವಾರ ಮಳೆಯಿಂದ ಆದ ಅವಘಡಗಳಿಗೆ ತುತ್ತಾಗಿ ಐದು ಮಂದಿ ಮೃತಪಟ್ಟಿದ್ದರು.
ಕೊಚ್ಚಿಯಲ್ಲಿ ಎರಡು ತಾಸು ಸುರಿದ ಭಾರಿ ಮಳೆಯ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಯಿತು. ಕೊಚ್ಚಿಯಲ್ಲಿ ಒಂದೂವರೆ ತಾಸಿನ ಅವಧಿಯಲ್ಲಿ ಸರಿಸುಮಾರು 98 ಮಿ.ಮೀ. ಮಳೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಪ್ರಮಾಣದ ಮಳೆಗೆ ಮೇಘಸ್ಫೋಟವೇ ಕಾರಣವಿರಬಹುದು ಎಂದಿದ್ದಾರೆ.
ಕಳಮಶ್ಶೇರಿ ಪ್ರದೇಶದಲ್ಲಿ ಸರಿಸುಮಾರು ಇನ್ನೂರು ಮನೆಗಳಿಗೆ ಮಳೆನೀರು ನುಗ್ಗಿದೆ. ಹಲವೆಡೆ ಕಚೇರಿಗಳಲ್ಲಿ ಕೆಲಸಕ್ಕೆ ಅಡ್ಡಿ ಉಂಟಾಯಿತು. ರಾಜ್ಯದ ಹಲವೆಡೆ ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿದ ಕಾರಣಕ್ಕೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರಾಜ್ಯದ ಹಲವೆಡೆ ಕೃಷಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಕೋಟಯಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋಟಯಂ ಮತ್ತು ಇಡುಕ್ಕಿ ಜಿಲ್ಲಾ ಆಡಳಿತವು ಎತ್ತರದ ಘಟ್ಟ ಪ್ರದೇಶಗಳಲ್ಲಿ ಸಂಚಾರಕ್ಕೆ ನಿರ್ಬಂಧಗಳನ್ನು ಹೇರಿವೆ.