LATEST NEWS
ಕೇರಳ – ಹಾಡುಹಗಲೇ ಕೇವಲ 3 ನಿಮಿಷದಲ್ಲಿ ಬ್ಯಾಂಕ್ ನಿಂದ 15 ಲಕ್ಷ ದರೋಡೆ ಮಾಡಿದ ಕಳ್ಳ

ಚಾಲಕುಡಿ ಫೆಬ್ರವರಿ 15: ಕೇವಲ 2 ರಿಂದ ಮೂರು ನಿಮಿಷಗಳ ಅವಧಿಯಲ್ಲಿ ಬ್ಯಾಂಕ್ ಸಿಬ್ಬಂದಿಯನ್ನ ಕೂಡಿ ಹಾಕಿ 15 ಲಕ್ಷ ಹಣವನ್ನು ಹಾಡುಹಗಲೇ ದರೋಡೆ ಮಾಡಿದ ಘಟನೆ ಶುಕ್ರವಾರ ತ್ರಿಶೂರ್ನ ಚಾಲಕುಡಿಯಲ್ಲಿರುವ ಫೆಡರಲ್ ಬ್ಯಾಂಕಿನ ಪೊಟ್ಟಾ ಶಾಖೆಯಲ್ಲಿ ನಡೆದಿದೆ.
ಮಧ್ಯಾಹ್ನ 02:00 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬ್ಯಾಂಕ್ ನ ಹೆಚ್ಚಿನ ಸಿಬ್ಬಂದಿ ಊಟಕ್ಕೆ ತೆರಳಿದ್ದ ವೇಳೆ ನುಗ್ಗಿದ ದರೋಡೆಕೋರ ಸಿಬ್ಬಂದಿಗೆ ಚಾಕುವಿನಿಂದ ಬೆದರಿಕೆ ಹಾಕಿ ಅವರನ್ನು ಬಾತ್ ರೂಮ್ ನಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಕ್ಯಾಶ್ ಕೌಂಟರ್ ನಲ್ಲಿದ್ದ 45 ಲಕ್ಷ ಕ್ಯಾಶ್ ನಲ್ಲಿ 15 ಲಕ್ಷ ಹಣ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಕಳ್ಳ ಹೆಲ್ಮೆಟ್ ಧರಿಸಿ ಬ್ಯಾಂಕ್ ಗೆ ನುಗ್ಗಿದ್ದಾನೆ ಎಂದು ಹೇಳಲಾಗಿದೆ. ಕಳ್ಳತನ ನಡೆಸಿ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ, ಆದರೆ ಅವನ ವೇಷ ಧರಿಸಿದ್ದರಿಂದ, ದರೋಡೆಕೋರನ ಗುರುತಿನ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳು ಹೊರಬಂದಿಲ್ಲ. ಚಾಲಕುಡಿಯ ಸ್ಥಳೀಯ ಪೊಲೀಸರು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ , ಬೆರಳಚ್ಚುಗಳು ಸೇರಿದಂತೆ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಹೆಚ್ಚಿನ ಸುಳಿವುಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ. ಕಳ್ಳನನ್ನು ಪತ್ತೆಹಚ್ಚಲು ಪೊಲೀಸರು ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸುವತ್ತ ಗಮನಹರಿಸಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳ ನಡುವೆ ಇದೀಗ ಕೇರಳದಲ್ಲೂ ನಡೆದಿದೆ. ಬ್ಯಾಂಕ್ ದರೋಡೆ ಅನ್ನೊದು ಒಂದು ರೀತಿಯ ಮಕ್ಕಳ ಆಟದ ರೀತಿ ಆಗಿದೆ.