LATEST NEWS
ಕೇರಳ – ಕೊರೊನಾ ನಡುವೆ ನಿಫಾ ವೈರಸ್ ಕಾಟ – ಬಾಲಕ ಬಲಿ ಪಡೆದ ನಿಫಾ ವೈರಸ್
ಕೇರಳ ಸೆಪ್ಟೆಂಬರ್ 5: ಕೊರೊನಾ ವೈರಸ್ ನಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ಕೇರಳಕ್ಕೆ ಇದೀಗ ಮತ್ತೊಂದು ವೈರಸ್ ಕಾಟ ಪ್ರಾರಂಭವಾಗಿದ್ದು, ನಿಫಾ ವೈರಸ್ ಸೋಂಕಿನ ಲಕ್ಷಣಗಳಿಂದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಸೋಂಕಿಗೊಳಗಾಗಿರುವ ಬಾಲಕ ಛತಮಂಗಳಂ ಹತ್ತಿರ ಬಳಿಯಿರುವ ಚುಲೂರ್ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ. ನಿಫಾ ಸೋಂಕಿನ ಶಂಕೆ ವ್ಯಕ್ತವಾಗಿರುವ ಮಾಹಿತಿಯ ನಂತರ ರಾಜ್ಯ ಸರ್ಕಾರ ಶನಿವಾರ ತಡರಾತ್ರಿ ಆರೋಗ್ಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಬಾಲಕ ಅತೀವ್ರ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದ. ಪ್ರಥಮಿಕ ಪರೀಕ್ಷೆಗಳಿಂದ ಬಾಲಕನಿಗೆ ನಿಫಾ ವೈರಸ್ ಇರುವುದನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ದೃಢಪಡಿಸಿದೆ.
ದುರದೃಷ್ಟವಶಾತ್, ಬಾಲಕ ಬೆಳಿಗ್ಗೆ 5 ಗಂಟೆಗೆ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಬಾಲಕನ ಸ್ಥಿತಿ ಗಂಭೀರವಾಗಿತ್ತು. ನಿನ್ನೆ ರಾತ್ರಿಯೇ ನಾವು ವಿವಿಧ ತಂಡಗಳನ್ನು ರಚಿಸಿದ್ದು, ನಿಫಾ ವೈರಸ್ ಪ್ರಕರಣಗಳ ಪತ್ತೆಹಚ್ಚುವಿಕೆಯನ್ನು ಆರಂಭಿಸಿದ್ದೇವೆ. ಬಾಲಕನ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪ್ರತ್ಯೇಕಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.