LATEST NEWS
ಸಹಾಯ ಕೇಳಿ ಬಂದ ಮಹಿಳೆ ಮೇಲೆ ಅತ್ಯಾಚಾರ ಆರೋಪ – ಕಾವೂರು ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಅರೆಸ್ಟ್

ಮಂಗಳೂರು ಜುಲೈ 16: ಮಹಿಳೆಯೊಬ್ಬರ ಮೇಲೆ ಅತ್ಯಾಚಾರದ ಆರೋಪದ ಹಿನ್ನಲೆ ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಕಾವೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಚಂದ್ರ ನಾಯಕ್ ಎಂದು ಗುರುತಿಸಲಾಗಿದೆ. ಅತ್ಯಾಚಾರ ಆರೋಪದ ಬಗ್ಗೆ ಮಹಿಳೆಯೋರ್ವರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಪ್ರಕಾರ ತನ್ನ ಗಂಡನು ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ, ಅದರ ವಿಡಿಯೋವನ್ನು ಚಿತ್ರೀಕರಣ ಮಾಡಿ, ಇತರರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಇಲ್ಲವಾದಲ್ಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯ ಬಿಡುವುದಾಗಿ ಬೆದರಿಸಿದ್ದಾನೆ. ಈ ವೇಳೆ ಸಂತ್ರಸ್ಥ ಮಹಿಳೆಯು ತನಗೆ ಪರಿಚಯವಿರುವ ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಚಂದ್ರನಾಯ್ಕ್ ನಿಗೆ ಈ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಚಂದ್ರನಾಯ್ಕ್ ನು ಸಂತ್ರಸ್ಥೆಯ ಮನೆಗೆ ಹೋಗಿ ಗಂಡನ ಮೊಬೈಲ್‌ನಲ್ಲಿದ್ದ ಪೋಟೋ ಮತ್ತು ವಿಡಿಯೋವನ್ನು ಅಳಿಸಿರುತ್ತಾನೆ. ನಂತರ ಸಂತ್ರಸ್ಥೆಯ ಗಂಡನ ದುಷ್ಪ್ರೇರಣೆಯಂತೆ ಚಂದ್ರನಾಯ್ಕ್ ನು ಸಂತ್ರಸ್ಥ ಮಹಿಳೆಯೊಂದಿಗೆ ಒತ್ತಾಯ ಪೂರ್ವಕವಾಗಿ ಅವಳ ಇಚ್ಚೆಯ ವಿರುದ್ದ ದೈಹಿಕ ಸಂಪರ್ಕ ನಡೆಸಿರುತ್ತಾನೆ.
ಸಂತ್ರಸ್ಥೆಯ ದೂರಿನ ಹಿನ್ನಲೆಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ಥ ಮಹಿಳೆಯ ಗಂಡ ಮತ್ತು ಕಾವೂರು ಠಾಣಾ ಪೊಲೀಸ್ ಕಾನ್ಸ್ಟೇಬಲ್ ಚಂದ್ರನಾಯ್ಕ್ ನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿದೆ.