LATEST NEWS
ಕಟೀಲು ಮೇಳದ ಕಾಲಮಿತಿ ಯಕ್ಷಗಾನಕ್ಕೆ ವಿರೋಧ – ಕಟೀಲಿಗೆ ಪಾದಯಾತ್ರೆ
ಮಂಗಳೂರು ಅಕ್ಟೋಬರ್ 17: ಸುಪ್ರೀಂಕೋರ್ಟ್ ಆದೇಶವನ್ನು ಇಟ್ಟುಕೊಂಡು ಕಾಲಮಿತಿ ಯಕ್ಷಗಾನ ನಡೆಸಲು ಮುಂದಾಗ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ.
ಯಕ್ಷಗಾನದ ಕಾಲಮಿತಿ ಪ್ರಯೋಗದ ಪ್ರಸ್ತಾವ ಕೈಬಿಡುವಂತೆ ಒತ್ತಾಯಿಸಿ ಸೇವಾ ಸಮಿತಿಗಳು ಮತ್ತು ಕಾಯಂ ಸೇವಾದಾರರು ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ ಕಟೀಲು ಆಡಳಿತ ಮಂಡಳಿ ಸರಿಯಾದ ಸ್ಪಂದನೆ ನೀಡದ ಕಾರಣ ಇದೀಗ ಪಾದಯಾತ್ರೆ ನಡೆಸಲು ಕಟೀಲು ಮೇಳದ ಯಕ್ಷಗಾನ ಸೇವಾ ಸಮಿತಿ ನಿರ್ಧರಿಸಿದೆ.
ನಿನ್ನೆ ನಡೆದ ಕಟೀಲು ಮೇಳದ ಯಕ್ಷಗಾನ ಸೇವಾ ಸಮಿತಿಗಳ ಪದಾಧಿಕಾರಿಗಳು ಮತ್ತು ಕಾಯಂ ಸೇವಾದಾರರ ಸಮಾಲೋಚನಾ ಸಭೆಯಲ್ಲಿ ಕಟೀಲು ಮೇಳದ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸುವುದನ್ನು ವಿರೋಧಿಸಿ ಬಜಪೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಪಾದಯಾತ್ರ ನಡೆಸಲು ಹಾಗೂ ಈ ನಿರ್ಧಾರ ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.