FILM
‘ಕಟಪಾಡಿ ಕಟ್ಟಪ್ಪ’ ವಿಮರ್ಶೆ: ಬಕೆಟ್ ರಾಜಕಾರಣಕ್ಕೆ ಕಾಮಿಡಿಯ ಲೇಪನ

‘ಕಟಪಾಡಿ ಕಟ್ಟಪ್ಪ’ ವಿಮರ್ಶೆ: ಬಕೆಟ್ ರಾಜಕಾರಣಕ್ಕೆ ಕಾಮಿಡಿಯ ಲೇಪನ
ಚಿತ್ರ ವಿಮರ್ಶೆ :- #Suni
ಮಂಗಳೂರು ಮಾರ್ಚ್ 30: ತುಳು ಸಿನಿಮಾ ಅಂದ್ರೆ ಬರೀ ಕಾಮಿಡಿ, ಒಂದಷ್ಟು ಡಬಲ್ ಮೀನಿಂಗ್ ಡೈಲಾಗ್ಸ್, ಅಲ್ಲಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಇದೇ ತರ ಈ ಸಿನಿಮಾ ಕೂಡ ಹತ್ತರಲ್ಲಿ ಹನ್ನೊಂದು ಅನ್ನೋ ಮನೋಭಾವನೆ ಇಟ್ಟುಕೊಂಡು ‘ಕಟಪಾಡಿ ಕಟ್ಟಪ್ಪ’ ನೋಡಲು ಥಿಯೇಟರ್ ಗೆ ಕಾಲಿಟ್ಟರೆ, ಉಹೂಂ.. ನಿಮ್ಮ ಊಹೆ ಸ್ವಲ್ಪಮಟ್ಟಿಗೆ ಸುಳ್ಳಾಗಬಹುದು. ನಟನೆಯನ್ನೇ ಅರಿಯದ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿರುವ ನಿರ್ದೇಶಕ ಜೆ.ಪಿ.ತುಮಿನಾಡ್ ಅಲ್ಲಲ್ಲಿ ಸ್ವಲ್ಪ ಉಪ್ಪು-ಹುಳಿ-ಖಾರ ಬೆರೆಸಿ ‘ಕಟಪಾಡಿ ಕಟ್ಟಪ್ಪ’ ಎಂಬ ಮಸಾಲೆ ಅರೆದಿದ್ದಾರೆ.
ಎಂದಿನಂತೆ ತುಳು ಸಿನಿಪ್ರಿಯರಿಗೆ ಮನೋರಂಜನೆಗೆ ಮೋಸ ಇಲ್ಲ. ಭೋಜರಾಜ್ ವಾಮಂಜೂರು ಪವರ್ ಫುಲ್ ಕಾಮಿಡಿ ಈ ಚಿತ್ರದ ಪ್ಲಸ್ ಪಾಯಿಂಟ್.

ನಮ್ಮ ರೇಟಿಂಗ್: 3.0/5
- ನಿರ್ದೇಶನ: ಜೆ.ಪಿ.ತುಮಿನಾಡ್
- ನಿರ್ಮಾಪಕ: ರಾಜೇಶ್ ಬ್ರಹ್ಮಾವರ್
- ಚಿತ್ರದ ವಿಧ: ಕಾಮಿಡಿ ಎಂಟರ್ನೈಮೆಂಟ್
ಕಲಾವಿದರು: ಉದಯ್ ಪೂಜಾರಿ ಬಲ್ಲಾಳ್ ಬಾಗ್, ಯಜ್ಞೇಶ್ವರ್ ಬರ್ಕೆ, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಚರಿಷ್ಮಾ ಸಾಲ್ಯಾನ್ ಹಾಗೂ ಮತ್ತಿತ್ತರರು.
‘ಕಟಪಾಡಿ ಕಟ್ಟಪ್ಪ’ ಒನ್ ಲೈನ್ ಸ್ಟೋರಿ
ಒಳ್ಳೆತನವನ್ನೇ ಮೈಗೂಡಿಸಿಕೊಂಡಿರುವ ‘ಕಟ್ಟಪ್ಪ’ (ಯಜ್ಞೇಶ್ವರ್ ಬರ್ಕೆ) ಎಂಬ ಮುಗ್ದ ಎಂಎಲ್ಎ. ಸದಾ ಆತನ ಕಾಲೆಳೆಯಲು ತಯಾರಾಗುವ ಬದ್ಧ ವೈರಿ ಲೋಕಿ (ವಿಜಯ್ ಕುಮಾರ್ ಕೊಡಿಯಾಲ್ ಬೈಲ್). ಇವರಿಬ್ಬರ ನಡುವೆ ಕಟ್ಟಪ್ಪನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುವ ಆತನ ರೈಟ್ ಹ್ಯಾಂಡ್ ಚಿತ್ರದ ನಾಯಕ ಚೇತು (ಉದಯ್ ಪೂಜಾರಿ).
ಭ್ರಷ್ಟಚಾರದಲ್ಲಿ ಮುಳುಗಿ ಶೋಕಿ ಜೀವನ ನಡೆಸುತ್ತಿರುವ ಮಂತ್ರಿಗೆ ಸದಾ ಬಕೆಟ್ ಹಿಡಿದು ತನ್ನ ಬೇಳೆ ಬೇಯಿಸಿಕೊಳ್ಳುವ ಎಂಎಲ್ಎ ಕಟ್ಟಪ್ಪನನ್ನು ರಾಜಕೀಯದಿಂದ ಮಟ್ಟ ಹಾಕಿ, ತಾನೂ ರಾಜಕಾರಣದ ಗದ್ದುಗೆ ಏರಬೇಕೆಂದು ಒಂದಿಲ್ಲೊಂದು ಪ್ಲ್ಯಾನ್ ಮಾಡುವ ಲೋಕಿ. ಕೊನೆಗೂ ಕಟ್ಟಪ್ಪನನ್ನು ಅಧಿಕಾರದಿಂದ ಇಳಿಸಿ ಲೋಕಿ ಗದ್ದುಗೆ ಏರ್ತಾರಾ ಅನ್ನೋದಕ್ಕೆ ಉತ್ತರ ಸಿನಿಮಾದಲ್ಲಿದೆ.
ಪವರ್ ಫುಲ್ ಕಾಮಿಡಿ ಪ್ಯಾಕೇಜ್
ಫ್ಯಾಮಿಲಿ ಸೆಂಟಿಮೆಂಟ್, ಕಣ್ಣೀರ ಕೋಡಿ, ಜಬರ್ದಸ್ತ್ ಫೈಟ್ ಅಂತ ಬೋರ್ ಹೊಡೆಸದೆ ಇರೋ ಈ ಸಾದಾ-ಸೀದಾ ಸಿನಿಮಾದ ಪ್ರಮುಖ ಆಕರ್ಷಣೆ ಅಂದ್ರೆ ಅದು ‘ಪವರ್ ಫುಲ್’ ಕಾಮಿಡಿ ಪ್ಯಾಕೇಜ್.
ಕೋಸ್ಟಲ್ ವುಡ್ ನ ‘ನವರಸ ರಾಜ’ ಭೋಜರಾಜ್ ವಾಮಂಜೂರು ಅವರ ಕಾಮಿಡಿ ಇಡೀ ಸಿನಿಮಾದ ಹೈಲೈಟ್ಸ್. ಅದೇ ಹಳೇ ಕಾಮಿಡಿ, ಡಬಲ್ ಮೀನಿಂಗ್ ಡೈಲಾಗ್ ಗಳಿಂದ ಬೇಸತ್ತಿದ್ದ ತುಳುವರಿಗೆ, ಹೊಸ ಶೈಲಿಯ ಕಾಮಿಡಿ ಮೂಲಕ ಜೆ.ಪಿ. ತುಮಿನಾಡ್ ಕೊಂಚ ಫ್ರೆಶ್ ನೆಸ್ ಫೀಲ್ ನೀಡಿದ್ದಾರೆ.
ಸೆಕೆಂಡ್ ಹಾಫ್ ನಲ್ಲಿ ಮಾನಸಿಕ ವೈದ್ಯ ‘ಡಾಕ್ಷರ್ ಪುಳಿಮುಂಚಿ’ಯಾಗಿ ಎಂಟ್ರಿ ಕೊಡುವ ‘ತುಳುವ ಮಾಣಿಕ್ಯ’ ಅರವಿಂದ್ ಬೋಳಾರ್ ತೆರೆಯ ಮೇಲೆ ಚಿಂದಿ ಉಡಾಯಿಸಿದ್ದಾರೆ.
ನಿರ್ದೇಶಕರ ಪರಿಶ್ರಮ:
ಮೂಲತಃ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡು ನಿರ್ದೇಶಕರ ಪಟ್ಟ ಅಲಂಕರಿಸಿದ ಜೆ.ಪಿ.ತುಮಿನಾಡ್ ಕೈ ಮೀರಿ ಮಾಡಿದ ಪರಿಶ್ರಮ ಇಡೀ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಎಲ್ಲಾ ಹೊಸಬರೇ ಆದ ಕಾರಣ ನಟನೆ, ಡ್ಯಾನ್ಸ್ ನಿಂದ ಹಿಡಿದು ಡೈಲಾಗ್ ಡೆಲಿವರಿ, ಫೇಸ್ ಎಕ್ಸ್ ಪ್ರೆಶನ್ ನ ಪಾಠ ಮಾಡಿ, ತಿದ್ದಿ-ತೀಡಿ ತೆರೆಯ ಮೇಲೆ ವಿಜೃಂಭಿಸುವಂತೆ ಮಾಡುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ ಎನ್ನಬಹುದು.
ಕಲಾವಿದರ ನಟನೆ
ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಯಜ್ಞೇಶ್ವರ್ ಬರ್ಕೆ, ಉದಯ್ ಪೂಜಾರಿ ಹಾಗೂ ಚರಿಷ್ಮಾ ಸಾಲ್ಯಾನ್, ನಟನೆಯಲ್ಲಿ ಅಲ್ಲಲ್ಲಿ ಎಡವಿದರೂ ಇಡೀ ಸಿನಿಮಾದಲ್ಲೂ ಎಲ್ಲೂ ಅಭಾಸ ಎನಿಸಲಿಲ್ಲ.
ಎರಡು ಶೇಡ್ ನಲ್ಲಿ ಮಿಂಚಿರುವ ಯಜ್ಞೇಶ್ವರ್ ಬರ್ಕೆ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಅಲ್ಲಲ್ಲಿ ಬಂದು ಹೋಗುವಂತಿದ್ದ ಪಾತ್ರವಾದರೂ ತನ್ನ ಪಾತ್ರದಲ್ಲಿ ವಿಭಿನ್ನ ಅಟಿಟ್ಯೂಡ್ ಮೆಂಟೈನ್ ಮಾಡುವಲ್ಲಿ ನಾಯಕಿ ಚರಿಷ್ಮಾ ಗೆದ್ದಿದ್ದಾರೆ.
ಇನ್ನು ನಿರ್ದೇಶಕ ಸ್ಥಾನದಿಂದ ನಟನಾಗಿ ಭಡ್ತಿ ಹೊಂದಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ವಿಲನ್ ಶೇಡ್ ನಲ್ಲಿ ಅಬ್ಬರಿಸಿದ್ದಾರೆ. ನಾಯಕ ನಟನಾಗಿ ಉದಯ್ ಪೂಜಾರಿ ಡ್ಯಾನ್ಸ್, ಫೈಟ್, ಕಾಮಿಡಿ ಎಲ್ಲವನ್ನೂ ಮ್ಯಾನೇಜ್ ಮಾಡಿದ್ದು, ನಟನಾ ಕ್ಷೇತ್ರಕ್ಕೆ ಹೊಸಬ ಅನ್ನೋ ಭಾವನೆಯನ್ನು ಸಿನಿಪ್ರಿಯರ ಮನದಿಂದ ಹೋಗಲಾಡಿಸಿದ್ದಾರೆ.
ಇನ್ನು ಕಾಮಿಡಿ ಕಿಂಗ್ ಗಳಾದ ಭೋಜರಾಜ್ ವಾಮಂಜೂರು ಹಾಗೂ ಅರವಿಂದ್ ಬೋಳಾರ್ ವಿಚಾರಕ್ಕೆ ಬಂದರೆ, ಅವರಿಬ್ಬರ ನಟನೆಯ ಬಗ್ಗೆ ಎರಡು ಮಾತಿಲ್ಲ. ಇಡೀ ಸಿನಿಮಾಗೆ ಎರಡು ಕಂಬಗಳಂತೆ ನಿಂತು ಸಿನಿಮಾವನ್ನು ಮುನ್ನಡೆಸಿದ್ದಾರೆ. ಇನ್ನುಳಿದಂತೆ ಕಾಮಿಡಿ ಕಿಲಾಡಿಗಳಾದ ಸೂರಜ್ ಹಾಗೂ ಧೀರಜ್ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ-ತಮ್ಮ ಪಾತ್ರಗಳಿಗೆ ತಕ್ಕ ನ್ಯಾಯ ಒದಗಿಸಿದ್ದಾರೆ.
ಸಂಗೀತ-ಸಂಭಾಷಣೆ-ತಾಂತ್ರಿಕ ವರ್ಗ
ಪ್ರಕಾಶ್ ಮ್ಯೂಸಿಕ್ ಕಂಪೋಸಿಷನ್, ರುದ್ರಮುನಿ ಬೆಳಗೆರೆ ಕ್ಯಾಮೆರಾ ಕೈ ಚಳಕ, ಜೆ.ಪಿ.ತುಮಿನಾಡ್ ಸಂಭಾಷಣೆ, ಗಣೇಶ್ ನೀರ್ಚಲ್ ಅವರ ಚುರುಕುತನದ ಸಂಕಲನ ಎಲ್ಲವೂ ಮಿಳಿತಗೊಂಡು, ಸಿನಿಮಾ ಯಶಸ್ವಿಯಾಗಿದೆ ಎನ್ನಬಹುದು. ಕೆಲವೊಂದು ಹಾಡುಗಳು ಇಷ್ಟವಾಗುತ್ತವೆ. ಮಹೇಶ್ ರಾಜ್ ಅವರ ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರದ ಮತ್ತೊಂದು ಹೈಲೈಟ್.
ಫೈನಲ್ ಸ್ಟೇಟ್ ಮೆಂಟ್
ಟೀಸರ್-ಟ್ರೈಲರ್ ನಲ್ಲಿ ಚಿತ್ರಕಥೆ ಗುಟ್ಟು ಬಿಟ್ಟು ಕೊಡದೆ ಜಾಣ್ಮೆ ತೋರಿದ್ದ ನಿರ್ದೇಶಕ ಜೆ.ಪಿ.ತುಮಿನಾಡ್ ತುಳುವರಿಗೆ ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ನೀಡಿದ್ದಾರೆ ಎನ್ನಬಹುದು. ಸ್ವಲ್ಪ ಆ್ಯಕ್ಷನ್, ಅಲ್ಲಲ್ಲಿ ರೋಮ್ಯಾನ್ಸ್ ಪ್ರೀತಿ-ಗೀತಿ ಇತ್ಯಾದಿ, ಜಬರ್ದಸ್ತ್ ಕಾಮಿಡಿ, ಕೊನೆಯಲ್ಲಿ ‘ಮಂಗಳೂರು ಉಳಿಸಿ’ ಎಂಬ ಒಂದೊಳ್ಳೆ ಮೆಸೇಜ್ ಉಳ್ಳ ‘ಕಟಪಾಡಿ ಕಟ್ಟಪ್ಪ’ ಸಿನಿಮಾವನ್ನು ಒಂದು ಬಾರಿ ನೋಡಲಡ್ಡಿಯಿಲ್ಲ.
ಚಿತ್ರದ ಕಥೆ ಹಾಗೂ ನಿರೂಪಣೆಗಳ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ, ನೋಡಿದರೆ ಇಷ್ಟ ಆಗುತ್ತದೆ. ಕಾಮಿಡಿ ಹಾಗೂ ಪಂಚ್ ಡೈಲಾಗ್ ಗಳೇ ಇಲ್ಲಿ ಪ್ರಧಾನವಾಗಿದ್ದು, ಈ ವೀಕೆಂಡ್ ನಲ್ಲಿ ಒಮ್ಮೆ ಥಿಯೇಟರ್ ನತ್ತ ಧಾವಿಸಬಹುದು. ಇಷ್ಟ ಆದ್ರೆ ಒಂದ್ಸಾರಿ ನೋಡಿ, ಜಾಸ್ತಿ ಇಷ್ಟ ಆದ್ರೆ ಮತ್ತೊಂದು ಬಾರಿ ನೋಡಿ.