LATEST NEWS
ಕಾಸರಗೋಡು ಮಂಗಳೂರು ನಡುವೆ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಂಗಳೂರು ಸೆಪ್ಟೆಂಬರ್ 12: ಕೊನೆಗೂ ಕಾಸರಗೋಡು-ಮಂಗಳೂರು ನಡುವೆ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ. ಕೊರೊನಾ ಲಾಕ್ ಡೌನ್ ವಿಚಾರದಲ್ಲಿ ಭಾರೀ ಸಮಸ್ಯೆ ತಂದೊಡ್ದಿದ್ದ ಕಾಸರಗೋಡು ಹಾಗೂ ಮಂಗಳೂರಿನ ನಡುವಿನ ಜನ ಸಂಚಾರ ವಿಷಯ ಇದೀಗ ಸರಿಯಾಗುವ ಹಂತಕ್ಕೆ ತಲುಪಿದೆ. ಇದೇ 21 ರಿಂದ ಕಾಸರಗೋಡು- ಮಂಗಳೂರು ನಡುವೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಗೊಳ್ಳಲಿದೆ. ಈ ಬಗ್ಗೆ ಇದೀಗ ಆದೇಶ ಹೊರಡಿಸಲಾಗಿದೆ.
ಕೊರೊನಾ ಪ್ರಾರಂಭ ಹಂತದಲ್ಲೇ ಮಂಗಳೂರು – ಕಾಸರಗೋಡು ನಡುವಿನ ಎಲ್ಲಾ ಗಡಿಗಳನ್ನು ಬಂದ್ ಮಾಡುವ ಮೂಲಕ ಎಲ್ಲಾ ರೀತಿಯ ಸಂಚಾರಗಳನ್ನು ಬಂದ್ ಮಾಡಲಾಗಿತ್ತು. ನಂತರ ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾದರೂ ಉಭಯ ಜಿಲ್ಲೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ನಂತರ ಕಾಸರಗೋಡು ಬಿಜೆಪಿ ಕೇರಳ ಹೈಕೋರ್ಟ್ ಮೆಟ್ಟಿಲೇರಿ ಗಡಿ ತೆರವಿಗೆ ಆದೇಶ ಪಡೆದಿತ್ತು. ಇದೀಗ ಕೇಂದ್ರ ಸರಕಾರದ ಖಡಕ್ ಸೂಚನೆ ಮೇರೆಗೆ ಉಭಯ ಜಿಲ್ಲಾಡಳಿತಗಳ ಕೆಲವು ಪ್ರಮುಖ ಗಡಿಗಳನ್ನು ತೆರವುಗೊಳಿಸಿ ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಇದೀಗ ಮಂಗಳೂರು-ಕಾಸರಗೋಡು ಜಿಲ್ಲೆಗಳ ನಡುವೆ ಕೆಎಸ್ಆರ್ಟಿಸಿ. ಬಸ್ ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ.

ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಚಾರ ನಡೆಸಲಿವೆ. ಒಂದು ಬಸ್‌ನಲ್ಲಿ 40 ಮಂದಿ ಇದ್ದಲ್ಲಿ ಮಾತ್ರವೇ ಸಂಚಾರ ನಡೆಸಲಿದೆ. ಮೊದಲ ಹಂತದಲ್ಲಿ ಕಾಸರಗೋಡು-ಮಂಗಳೂರು ಹಾಗೂ ಕಾಸರಗೋಡು-ಪಂಜಿಕ್ಕಲ್ ರಸ್ತೆಗಳಲ್ಲಿ ಮಾತ್ರ ಬಸ್ ಸಂಚಾರ ಆರಂಭಿಸಲಾಗುವುದು ಎಂದು ತಿಳಿದು ಬಂದಿದೆ