National
ಕಾಸರಗೋಡಿನಲ್ಲಿ ಹಾಫ್ ಲಾಕ್ ಡೌನ್, ನಾಳೆಯಿಂದ ವಾಹನ ಸಂಚಾರ ಇರಲ್ಲ..!
ಮಂಗಳೂರು, ಜುಲೈ 16 : ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಫ್ ಲಾಕ್ ಡೌನ್ ಜಾರಿಗೆ ತರಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಜುಲೈ 17ರಿಂದಲೇ ಹಾಫ್ ಲಾಕ್ ಡೌನ್ ಜಾರಿಗೆ ಬರಲಿದ್ದು ಯಾವುದೇ ವಾಹನ ಸಂಚಾರಕ್ಕೂ ಅವಕಾಶ ಇರುವುದಿಲ್ಲ. ಆದರೆ, ಅಗತ್ಯ ಸಾಮಗ್ರಿಗಳ ಅಂಗಡಿ ಇನ್ನಿತರ ವ್ಯಾಪಾರ ಸಂಸ್ಥೆಗಳು ಬೆಳಗ್ಗೆ 11 ರಿಂದ ಸಂಜೆ 5 ರ ವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ವಾಹನಗಳ ಮೂಲಕ ಜನರ ಸಂಚಾರವನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ಸಜಿತ್ ಬಾಬು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.
ನಾಳೆಯಿಂದ ಜುಲೈ 30ರ ವರೆಗೆ ಈ ಆದೇಶ ಜಾರಿಯಲ್ಲಿ ಇರಲಿದ್ದು ಜನರು ವೈದ್ಯಕೀಯ ಅಗತ್ಯ ಹೊರತುಪಡಿಸಿ ಸಂಚಾರಕ್ಕೆ ವಾಹನ ಬಳಸುವಂತಿಲ್ಲ. ವಾಹನ ಬಳಕೆ ಕಂಡುಬಂದರೆ ಪೊಲೀಸರು ಕೇಸು ದಾಖಲಿಸಿ ಕ್ರಮ ಜರುಗಿಸಲಿದ್ದಾರೆ. ಸುಲಭದಲ್ಲಿ ಜನರ ಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ. ಕಾಸರಗೋಡು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲೂ ಈಗ ಕೊರೊನಾ ಸೋಂಕು ಕಂಡುಬರುತ್ತಿದ್ದು ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗಳಲ್ಲಿ ಸೋಂಕಿತರ ಬೆಡ್ ಫುಲ್ ಆಗಿದೆ ಎನ್ನಲಾಗ್ತಿದೆ.