LATEST NEWS
ಕಾಸರಗೋಡು- ಮಂಗಳೂರು ಸಂಚಾರದ ಡೈಲಿ ಪಾಸ್ ರದ್ದು !!

ಮಂಗಳೂರು, ಜೂನ್ 6 : ಮಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ಹೋಗಿ ಬರಲು ನೀಡಿದ್ದ ಡೈಲಿ ಪಾಸ್ ಗಳನ್ನು ಕೇರಳ ಸರಕಾರ ದಿಢೀರ್ ರದ್ದುಗೊಳಿಸಿದೆ.
ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕಾಸರಗೋಡು ಮತ್ತು ಮಂಜೇಶ್ವರದಿಂದ ಸಾವಿರಾರು ಮಂದಿ ಮಂಗಳೂರಿಗೆ ಉದ್ಯೋಗಕ್ಕಾಗಿ ಬರುತ್ತಾರೆ. ಹಾಗೆಯೇ ವಿವಿಧ ಕೆಲಸಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನ ಕೇರಳದ ಕಾಸರಗೋಡಿಗೆ ತೆರಳುತ್ತಾರೆ.

ವೈದ್ಯರು, ವಕೀಲರು ಹೀಗೆ ವೈಟ್ ಕಾಲರ್ ಜಾಬಲ್ಲಿರುವ ಮಂದಿ ಸೇರಿದಂತೆ ಎಲ್ಲರೂ ಕಳೆದೊಂದು ತಿಂಗಳಿಂದ ಉಭಯ ಜಿಲ್ಲಾಡಳಿತಗಳು ನೀಡಿದ್ದ ಪಾಸ್ ಪಡೆದು ಅತ್ತಿಂದಿತ್ತ ಹೋಗುತ್ತಿದ್ದರು. ತಲಪಾಡಿ ಗಡಿಯಲ್ಲಿ ಪಾಸ್ ಪರಿಶೀಲನೆಗೆ ಕರ್ನಾಟಕ ಮತ್ತು ಕೇರಳ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಇದೀಗ ಮಂಗಳೂರು ನಗರ ಮತ್ತು ಉಳ್ಳಾಲ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಸರಗೋಡು ಜಿಲ್ಲಾಡಳಿತ ದಿಢೀರ್ ನಿರ್ಧಾರ ಕೈಗೊಂಡಿದೆ. ಅಷ್ಟಕ್ಕೂ ಮಂಗಳೂರಿಗೆ ಉದ್ಯೋಗಕ್ಕಾಗಿ ತೆರಳಬೇಕಿದ್ದರೆ 28 ದಿವಸ ಅಲ್ಲಿಯೇ ಇರಿ. ಕಾಸರಗೋಡು ಜಿಲ್ಲೆಗೆ ಬರುವ ಮಂದಿಯೂ 28 ದಿವಸ ಇರಬೇಕಾಗುತ್ತದೆ. 28 ದಿವಸಕ್ಕೊಮ್ಮೆ ಹೋಗಿ ಬರಲು ಪಾಸ್ ನೀಡಲಾಗುವುದು. ಇದು ವೈದ್ಯರಿಗೂ ಅನ್ವಯ ಎಂದು ಚಂದ್ರಶೇಖರನ್ ಮಾಹಿತಿ ನೀಡಿದ್ದಾರೆ. ಇ- ಪಾಸ್ ನೀಡುವುದನ್ನು ತಕ್ಷಣದಿಂದಲೇ ರದ್ದುಪಡಿಸಲಾಗುವುದು. ಅಲ್ಲದೆ, ಈಗಾಗ್ಲೇ ನೀಡಿರುವ ಪಾಸ್ ಗಳನ್ನೂ ಕ್ಯಾನ್ಸಲ್ ಮಾಡಲಾಗುವುದು ಎಂದಿದ್ದಾರೆ.
ಕಳೆದ ಜೂನ್ ಮೊದಲ ವಾರದಲ್ಲಿ ಉಭಯ ಜಿಲ್ಲಾಡಳಿತಗಳು ತುರ್ತು ಅಗತ್ಯಕ್ಕಾಗಿ ತೆರಳುವವರಿಗೆ ಇ- ಪಾಸ್ ನೀಡಿದ್ದವು. ಇದನ್ನು ಬಳಸಿಕೊಂಡು ನಿತ್ಯ ನೂರಾರು ಮಂದಿ ಹೋಗಿ ಬರುತ್ತಿದ್ದರು. ಮಂಗಳೂರಿಗೆ ತೆರಳಿದವರಿಗೆ ಕೊರೊನಾ ಸೋಂಕು ಕಂಡುಬಂದ ಕಾರಣ ಕಾಸರಗೋಡು ಜಿಲ್ಲಾಡಳಿತ ಈ ನಿರ್ಣಯ ತೆಗೆದಿದೆ ಎನ್ನಲಾಗ್ತಿದೆ.