DAKSHINA KANNADA
ಕಡಬ ಆ್ಯಸಿಡ್ ದಾಳಿ ಸಂತ್ರಸ್ಥೆಯರನ್ನು ಭೇಟಿ ಮಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ
ಮಂಗಳೂರು ಮಾರ್ಚ್ 05: ಆ್ಯಸಿಡ್ ದಾಳಿಗೊಳಗಾದ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಇಲ್ಲಿನ ಎ.ಜೆ.ಆಸ್ಪತ್ರೆಯಲ್ಲಿ ಮಂಗಳವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಆ್ಯಸಿಡ್ ದಾಳಿ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಕ್ಷಣ ತಲಾ 4 ಲಕ್ಷ ರೂಪಾಯಿ ಚಿಕಿತ್ಸೆ ಪರಿಹಾರವಾಗಿ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ತೀವ್ರ ಗಾಯವಾಗಿದೆ. ಅವರಿಗೆ ವಾರದ ಬಳಿಕ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಗೆ 20 ಲಕ್ಷದ ವರೆಗೆ ಚಿಕಿತ್ಸಾ ಪರಿಹಾರವನ್ನು ಸರ್ಕಾರ ಭರಿಸಲಿದೆ” ಎಂದು ಭರವಸೆ ನೀಡಿದ್ದಾರೆ.
ಸದ್ಯಕ್ಕೆ ವಿದ್ಯಾರ್ಥಿನಿಯರು ಪರೀಕ್ಷೆ ಬಗ್ಗೆ ಹೆಚ್ಚು ಆತಂಕಿತರಾಗಿದ್ದಾರೆ. ಮೊದಲ ದಿನ ಬರೆದ ಕನ್ನಡ ಪರೀಕ್ಷೆಯನ್ನು ಮತ್ತೆ ಬರೆಯಬೇಕಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಭಯ ಬೇಡ ಎಂದು ಧೈರ್ಯ ತುಂಬಿದ್ದೇನೆ ಎಂದರು. ಇಂತಹ ಒತ್ತಡ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಸ್ಥೈರ್ಯ ತುಂಬುವ ಅಗತ್ಯವಿದೆ ಎಂದರು.