LATEST NEWS
ಸಾಂಪ್ರದಾಯಿಕ ಡೋಲು ವಾದನದಲ್ಲಿ ಅಗ್ರಗಣ್ಯರೆನಿಸಿದ್ದ ಗುರುವ ಕೊರಗ ಇನ್ನಿಲ್ಲ

ಉಡುಪಿ ಅಗಸ್ಟ್ 22: ಸಾಂಪ್ರದಾಯಿಕ ಡೋಲು ವಾದನದಲ್ಲಿ ಅಗ್ರಗಣ್ಯರೆನಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ (105) ನಿಧನರಾಗಿದ್ದಾರೆ.
ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಗುರುವ ಕೊರಗ, ಹಿರಿಯಡ್ಕದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ. ತಮ್ಮ 12ನೇ ವಯಸ್ಸಿನಿಂದಲೂ ಡೋಲು ಬಾರಿಸುವುದು ಹಾಗೂ ಬುಟ್ಟಿ ಹೆಣೆಯುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಜಾತ್ರೆ, ಉತ್ಸವ, ಕಂಬಳ, ಕೋಲ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡೋಲು ಬಾರಿಸುತ್ತಿದ್ದರು. ಇವರು ಡೋಲು ನುಡಿಸುವ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿದ್ದಾರೆ.

ಇವರ ಕಲೆಗೆ ರಾಜ್ಯೋತ್ಸವ, ಜನಪದ ಶ್ರೀ, ತುಳು ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಅವರು ನಿಧನರಾಗಿದ್ದಾರೆ. ಮೃತರಿಗೆ ಮೂವರು ಪುತ್ರಿಯರು ಇದ್ದಾರೆ. ಸ್ವತಃ ಡೋಲು ಸಿದ್ಧಪಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಗುರುವ ಕೊರಗರು ಡೋಲು ಬಾರಿಸುವಲ್ಲಿ ನಿಷ್ಣಾತರಾಗಿದ್ದರು. ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಕಲಾವಿದರಲ್ಲಿ ಒಬ್ಬರು.