Connect with us

    KARNATAKA

    Karnataka Police : ಕರ್ತವ್ಯ ಲೋಪವೆಸಗಿದ ಪೊಲೀಸರ ವಿಚಾರಣೆ ಇನ್ಮುಂದೆ ನಿವೃತ್ತ ನ್ಯಾಯಾಧೀಶರ ಹೆಗಲಿಗೆ .!

    ಕರ್ತವ್ಯ ಲೋಪವೆಸಗಿದ ಪೊಲೀಸರ ವಿಚಾರಣೆ ಇನ್ಮುಂದೆ ನಿವೃತ್ತ ನ್ಯಾಯಾಧೀಶರ ಹೆಗಲಿಗೆರಲಿದೆ  ರಾಜ್ಯ ಸರಕಾರ ತನಿಖೆಯಲ್ಲಿ ಲೋಪವೆಸಗಿದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಣೆಗೆ ರಚಿಸಲಾಗಿದ್ದ ‘ಖುಲಾಸೆಗೊಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿ’ಯ ವಿಚಾರಣೆ ಮಾರ್ಗಸೂಚಿ ಪರಿಷ್ಕರಣೆ ಮಾಡಿದೆ. ಕರ್ತವ್ಯಲೋಪ ಆರೋಪ ಎದುರಿಸುತ್ತಿರುವ ಪೊಲೀಸ್‌ ಅಧಿಕಾರಿಗಳ ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲಾಗುತ್ತಿದೆ. ಈ ಹಿಂದೆ ಸಮಿತಿಯಲ್ಲಿ ಕ್ರಮಬದ್ಧವಾಗಿ ವಿಚಾರಣೆ ನಡೆಯುತ್ತಿಲ್ಲ ಎಂದು ಕರ್ನಾಟಕ ಆಡಳಿತ ಮಂಡಳಿ ನೀಡಿದ ನಿರ್ದೇಶನದ ಮೇರೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

    ಸರಕಾರದ ಇತರೆ ಇಲಾಖೆಗಳಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಖುಲಾಸೆಗೊಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿಯು ಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಆಯಾ ಪೊಲೀಸ್‌ ವಲಯ ಹಾಗೂ ಕಮಿಷನರೇಟ್‌ಗಳ ಶಿಸ್ತು ಪ್ರಾಧಿಕಾರಗಳಿಗೆ ಪರಿಷ್ಕೃತ ಮಾರ್ಗಸೂಚಿ ಅನುಸರಿಸುವಂತೆ ರಾಜ್ಯ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ. ನ್ಯಾಯಾಲಯಗಳಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಶೇ.10ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗುತ್ತಿದ್ದು, ಶೇ. 90ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌, ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಪೊಲೀಸ್‌ ಇಲಾಖೆಯಲ್ಲಿ”ಖುಲಾಸೆಗೊಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿ” ರಚಿಸುವಂತೆ ನಿರ್ದೇಶನ ನೀಡಿತು. ಅದರಂತೆ ಪೊಲೀಸ್‌ ಇಲಾಖೆಯಲ್ಲಿ ಕಮಿಷನರೇಟ್‌ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳು ರಚನೆಯಾದವು.
    ಜಿಲ್ಲಾ ನ್ಯಾಯಾಲಯಗಳಲ್ಲಿ ಖುಲಾಸೆಗೊಂಡ ಪ್ರಕರಣಗಳ ಸಂಬಂಧ ಸರಕಾರಿ ಅಭಿಯೋಜಕರಿಂದ ವರದಿ ತರಿಸಿಕೊಂಡ ಸಮಿತಿ, ಸಂಬಂಧಪಟ್ಟ ಪ್ರಕರಣದ ತನಿಖಾಧಿಕಾರಿ ವಿರುದ್ಧ ವಿಚಾರಣೆ ನಡೆಸಿ ಲೋಪವಾಗಿರುವುದು ಕಂಡುಬಂದಲ್ಲಿ ಅಂತಹ ಪೊಲೀಸ್‌ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತಿತ್ತು. ಸಮಿತಿಯಲ್ಲಿ ವಿಚಾರಣೆಯನ್ನು ಪೊಲೀಸ್‌ ಅಧಿಕಾರಿಗಳೇ ನಡೆಸುತ್ತಿದ್ದರಿಂದ ನ್ಯಾಯಯುತವಾಗಿ ಮತ್ತು ಕ್ರಮಬದ್ಧವಾಗಿ ವಿಚಾರಣೆ ನಡೆಯುತ್ತಿಲ್ಲ ಎಂದು ವಿಚಾರಣೆ ಎದುರಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಕೆಎಟಿ ಮೊರೆ ಹೋಗಿದ್ದರು. ಈ ಪ್ರಕರಣವನ್ನು ಉದಾಹರಣೆಯಾಗಿರಿಸಿಕೊಂಡು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು, ಸಮಿತಿಯ ವಿಚಾರಣೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೀಡಿದ ಸೂಚನೆ ಮೇರೆಗೆ ಪೊಲೀಸ್‌ ಇಲಾಖೆಯು ಸಮಿತಿಯ ವಿಚಾರಣೆ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

    ತನಿಖಾ ಪ್ರಕ್ರಿಯೆಯಲ್ಲಿ ಲೋಪ, ಅಭಿಯೋಜನೆಗೆ ಪೂರಕ ಸಾಕ್ಷ್ಯ ನುಡಿಯದಿರುವುದು, ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವುದು ಪ್ರಕರಣಗಳ ವಜಾಕ್ಕೆ ಕಾರಣವಾಗುತ್ತಿದೆ. ಇದರಿಂದ ಆರೋಪಿಗಳು ಲಾಭ ಪಡೆಯುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕರ್ತವ್ಯ ಲೋಪವೆಸಗಿದ ಪೊಲೀಸ್‌ ಅಧಿಕಾರಿಗಳ ವಿಚಾರಣೆಯನ್ನು ಸಮಿತಿ ನಡೆಸಲಿದೆ. ತನಿಖಾಧಿಕಾರಿಗಳಿಂದ ಸಮಜಾಯಿಷಿ ಪಡೆದು ಪರಿಶೀಲಿಸಿ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿರುವುದು ದೃಢಪಟ್ಟಲ್ಲಿ ಇಲಾಖಾ ತನಿಖೆ ವಿಚಾರಣೆಗಾಗಿ ಶಿಫಾರಸು ಮಾಡಬೇಕೆಂದು ಆಯಾ ವಲಯದ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಹಾಗೂ ಆಯುಕ್ತರಿಗೆ ನಿರ್ದೇಶಿಸಲಾಗಿದೆ.

    ಇನ್ಸ್‌ಪೆಕ್ಟರ್‌ ಮೇಲ್ಪಟ್ಟ ಪೊಲೀಸ್‌ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪ್ರಕರಣ ಕಂಡು ಬಂದರೆ ಪೂರ್ಣ ಪ್ರಮಾಣದ ದಾಖಲೆಯನ್ನು ಪ್ರಧಾನ ಕಚೇರಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಸಮಿತಿಯ ಶಿಫಾರಸಿನಂತೆ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗಿಂತ ಕೆಳಹಂತದ ಹುದ್ದೆಗಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಇಲಾಖಾ ವಿಚಾರಣೆಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಬೇಕಿದೆ ಎಂದು ಪೊಲೀಸ್‌ ಇಲಾಖೆಯ ಎಐಜಿಪಿ (ಆಡಳಿತ) ಕಲಾ ಕೃಷ್ಣಸ್ವಾಮಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *