DAKSHINA KANNADA
ತಲಪಾಡಿ ಗಡಿ ಓಪನ್ ಸದ್ಯಕ್ಕಿಲ್ಲ..! ಜೂನ್ 8ರ ಬಳಿಕ ಅಂತಿಮ ನಿರ್ಧಾರ
ತಲಪಾಡಿ ಗಡಿ ಓಪನ್ ಸದ್ಯಕ್ಕಿಲ್ಲ..! ಜೂನ್ 8ರ ಬಳಿಕ ಅಂತಿಮ ನಿರ್ಧಾರ
ಮಂಗಳೂರು, ಜೂನ್ 1: ಕರ್ನಾಟಕ – ಕೇರಳ ಗಡಿಭಾಗದ ರಸ್ತೆಗಳನ್ನು ತೆರೆಯುವ ಲಕ್ಷಣ ಸದ್ಯಕ್ಕಿಲ್ಲ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.
ಜೂನ್ 8ರ ಬಳಿಕವೇ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರಕಾರ ಅಂತಾರಾಜ್ಯ ಗಡಿ ತೆರೆಯುವ ಬಗ್ಗೆ ಆಯಾ ರಾಜ್ಯಗಳಿಗೆ ನಿರ್ಧಾರ ತೆಗೆದುಕೊಳ್ಳಲು ಬಿಟ್ಟಿದೆ.
ಹೀಗಾಗಿ ಕಾಸರಗೋಡು – ಮಂಗಳೂರು ಗಡಿಭಾಗ ಓಪನ್ ಆಗಬಹುದೆಂದು ಜನ ನಿರೀಕ್ಷೆಯಲ್ಲಿದ್ದರು. ಆದರೆ, ಕೇರಳ- ಕರ್ನಾಟಕ ಸರಕಾರಗಳು ಗಡಿಭಾಗದ ಜನರ ನಿರೀಕ್ಷೆಗೆ ತಣ್ಣೀರು ಹಾಕಿದೆ.
ಕಾಸರಗೋಡಿನ ಜನರು ಹೆಚ್ಚಾಗಿ ಮಂಗಳೂರನ್ನು ಆಶ್ರಯಿಸಿದ್ದು ದಿನಂಪ್ರತಿ ಸಾವಿರಾರು ಮಂದಿ ಉದ್ಯೋಗಕ್ಕೆ ಬಂದು ಹೋಗುತ್ತಿದ್ದರು.
ಆದರೆ ಲಾಕ್ ಡೌನ್ ಆದಬಳಿಕ ಕಳೆದ ಮೂರು ತಿಂಗಳಲ್ಲಿ ಕಾಸರಗೋಡಿನ ಜನರು ಕರ್ನಾಟಕ ಪ್ರವೇಶ ಸಾಧ್ಯವಾಗದೆ ಕಂಗಾಲಾಗಿದ್ದರು.
ಇದೀಗ ಕೇಂದ್ರ ಸರಕಾರ “ಅನ್ ಲಾಕ್ ವನ್ ” ಘೋಷಣೆ ವೇಳೆ ಗಡಿಭಾಗದ ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದು ತಲಪಾಡಿ ಗೇಟ್ ಓಪನ್ ಆಗಬಹುದು ಎನ್ನುವ ಆಸೆ ಗರಿಗೆದರುವಂತೆ ಮಾಡಿತ್ತು.
ಕಾಸರಗೋಡು ಮತ್ತು ಮಂಗಳೂರಿನ ಹಲವು ಸಂಘಟನೆಗಳು ಈ ಬಗ್ಗೆ ಆಯಾ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿ, ಗಡಿ ತೆರೆಯುವಂತೆ ಒತ್ತಡವನ್ನೂ ಹಾಕಿತ್ತು.
ಆದರೆ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿರುವುದು ಗಡಿ ತೆರೆಯುವ ಪ್ರಸ್ತಾಪವನ್ನು ಮುಂದಕ್ಕೆ ಹಾಕಿದೆ.
ಅತ್ತ ಕೇರಳ ಸರಕಾರವೂ ಗಡಿ ಓಪನ್ ಮಾಡಲು ಹಿಂದೇಟು ಹಾಕಿದೆ. ಇದೇ ವೇಳೆ, ಕರ್ನಾಟಕ ಸರಕಾರ ಸೇವಾ ಸಿಂಧು ಏಪ್ ನಲ್ಲಿ ನೋಂದಾಯಿಸಿದವರಿಗೆ ಪಾಸ್ ಸಿಗದಿದ್ದರೂ ಕೇರಳ ಪ್ರವೇಶಕ್ಕೆ ಅನುಮತಿ ನೀಡಿದೆ.
ಆದರೆ, 14 ದಿನ ಕ್ವಾರಂಟೈನ್ ಮಾಡಲೇಬೇಕು. ನೋಂದಣಿ ಆಗಿ ಪಾಸ್ ಸಿಗದೆ ಉಳಿದಿದ್ದವರಿಗೆ ಪ್ರವೇಶ ನೀಡಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.