KARNATAKA
ಭಯೋತ್ಪಾದಕರನ್ನು ಅರೆಸ್ಟ್ ಮಾಡಿದರೂ ಕೂಡ ಪೊಲೀಸ್ ಠಾಣೆಗೆ ನುಗ್ತಿರಾ – ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ತರಾಟೆ
ಬೆಂಗಳೂರು ಮೇ 31 : ಜನಪ್ರತಿನಿಧಿಯಾದ ವ್ಯಕ್ತಿ ಯಾವನೋ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಕ್ಕೆ ಪೊಲೀಸ್ ಠಾಣೆಗೆ ಹೋಗುವುದು ಎಷ್ಟು ಸರಿ. ಭಯೋತ್ಪಾದಕನನ್ನು ಪೊಲೀಸರು ಬಂಧಿಸುತ್ತಾರೆ. ಅವನ ಪತ್ನಿ ಬಂದು ನನ್ನ ಪತಿ ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ. ಅಮಾಯಕರಾದ ಅವರನ್ನು ಪೊಲೀಸರು ಬಂದಿಸಿದ್ದಾರೆ ಎಂದರೆ ತಕ್ಷಣ ಜನಪ್ರತಿನಿಧಿ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವೇ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಮುಖಂಡರನ್ನು ಬಂಧಿಸಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನು ನಿಂದಿಸಿದ ಆರೋಪದ ಮೇಲೆ ದಾಖಲಾದ ಪ್ರಕರಣಗಳನ್ನು ರದ್ದು ಪಡಿಸಬೇಕೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದೆ. ಪೊಲೀಸ್ ಠಾಣೆಗೆ ಏಕೆ ಹೋಗಿದ್ದು? ಶಾಸಕರಾದ ಮಾತ್ರಕ್ಕೆ ಠಾಣೆಗೆ ಹೋಗಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಬಹುದೇ? ಭಯೋತ್ಪಾದಕರನ್ನು ಪೊಲೀಸರು ಹಿಡಿದು ತಂದರೆ, ಆಗಲೂ ಪೊಲೀಸ್ ಠಾಣೆಗೆ ಹೋಗಿ ಪೊಲೀಸರನ್ನು ಪ್ರಶ್ನೆ ಮಾಡುವಿರಾ? ಇದನ್ನೆಲ್ಲಾ ಒಪ್ಪಲು ಆಗುವುದಿಲ್ಲ. ನಾಳೆ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ನೋಡಲು ಕೋರ್ಟ್ ಬಂದು ನಮ್ಮ ಮುಂದೆ ಕುಳಿತರೆ ಹೇಗೆ? ಆಗ ಏನು ಮಾಡುವುದು ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಖಾರವಾಗಿ ಪ್ರಶ್ನಿಸಿದೆ.
ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಉತ್ತರ ಕಂಡುಕೊಳ್ಳಬಹುದು. ಆದರೆ, ಜನಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆಯ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು, ಪೊಲೀಸರನ್ನು ನಿಂದಿಸುವುದು ಎಷ್ಟು ಸರಿ? ಅಲ್ಲದೆ, ಶಾಸಕರು ಕಾನೂನು ರಚಿಸುವ ಹೊಣೆಯನ್ನು ಹೊಂದಿರುವುದು. ಅದರ ಬದಲು ನ್ಯಾಯಾಲಯ ಮಾಡುವ ಕೆಲಸಕ್ಕೆ ಮುಂದಾಗುವುದು ಎಷ್ಟು ಸರಿ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಪ್ರತಿ ತಾಲೂಕಿನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿದ್ದಾರೆ, ಅವರೇ ಮಾಡಲಿ. ನ್ಯಾಯಾಲಯದ ಕಾರ್ಯವನ್ನು ನೀವು ಮಾಡುವುದಕ್ಕೆ ಮುಂದಾಗಬೇಡಿ. ನಿಮ್ಮ ಕೆಲಸ ಏನಿದೆ, ಅದನ್ನು ಮಾಡಿ, ನ್ಯಾಯಾಲಯ ತನ್ನ ಕಾರ್ಯ ಮಾಡುವುದಕ್ಕೆ ಬಿಡಿ ಎಂದು ಪೀಠ ಶಾಸಕ ಪೂಂಜಾ ಪರವಾಗಿ ಹಾಜರಾಗಿದ್ದ ವಕೀಲರಿಗೆ ಸಲಹೆ ನೀಡಿದೆ. ನಂತರ ಅರ್ಜಿಯಲ್ಲಿ ಪ್ರತಿವಾದಿಯಾದ ಬೆಳ್ತಗಂಡಿ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.