LATEST NEWS
ವಿಕೃತಕಾಮಿ ಉಮೇಶ್ ರೆಡ್ಡಿಗೆ ಪೆರೋಲ್ ಕೊಡಲ್ಲ ಎಂದ ಹೈಕೋರ್ಟ್

ಬೆಂಗಳೂರು ಫೆಬ್ರವರಿ 27 : ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಉಮೇಶ್ ರೆಡ್ಡಿ, ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯೊಂದಿಗೆ ಇರಲು 30 ದಿನಗಳ ಕಾಲ ಪೆರೋಲ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪೆರೋಲ್ ನೀಡಲು ನಿರಾಕರಿಸಿದೆ.
ಅರ್ಜಿದಾರರಿಗೆ ಪೆರೋಲ್ ನೀಡಲು ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಬೇಕು, ಅರ್ಜಿದಾರರಿಗೆ ಪೆರೋಲ್ ನೀಡಿದಲ್ಲಿ ಮತ್ತೆ ಅಪರಾಧ ಪ್ರವೃತ್ತಿಯನ್ನು ಹೊಂದಿರಬಹುದು ಅಥವಾ ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಜೈಲು ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿರುವ ಸುಪ್ರೀಂಕೋರ್ಟ್ ಅರ್ಜಿದಾರರು ಜೈಲಿನಿಂದ ಹೊರ ಬಂದಲ್ಲಿ ಅವರ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿದೆ ಎಂಬ ಅಂಶವನ್ನು ಉಲ್ಲೇಖಿಸಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
