LATEST NEWS
ಕೊರೊನಾ ನಿಭಾಯಿಸಲು ರಾಜ್ಯ ಸರಕಾರ ಸಂಪೂರ್ಣ ಸೋತಿದೆ ; ಕಾಂಗ್ರೆಸ್ ನಿಯೋಗ
ಮಂಗಳೂರು, ಜುಲೈ 23: ಕೊರೊನಾ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಸಾಮಾನ್ಯ ಜನರು ಬೀದಿಯಲ್ಲಿ ಬಿದ್ದು ಸಾಯುವ ಸ್ಥಿತಿ ಬಂದಿದೆ. ಬೆಂಗಳೂರು ಬಿಟ್ಟರೆ ಮಂಗಳೂರಿನಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ. ಬೆಂಗಳೂರಿನಲ್ಲಿ ಎಂಟು ಜನ ಉಸ್ತುವಾರಿಗಳಿದ್ದು ಪರಸ್ಪರ ಕೋಆರ್ಡಿನೇಶನ್ ಇಲ್ಲದೆ ಸ್ಪರ್ಧೆ ನಡೆಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ನಿಯೋಗ, ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ಪ್ರತಿನಿಧಿಗಳು ಕೊರೊನಾ ಪ್ರಕರಣ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ಸೋತಿದ್ದಾರೆ. ಇದರ ಬದಲಿಗೆ ಕಿಟ್ ಖರೀದಿ ವಿಚಾರದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಆದವರು ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್ ಆಗುತ್ತಿದ್ದಾರೆ. ಜನರಲ್ಲಿ ಈ ಬಗ್ಗೆ ಗೊಂದಲಗಳಿದ್ದು ರಾಜ್ಯ ಸರ್ಕಾರ ಸಂಶಯ ನಿವಾರಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 16 ಆಂಬುಲೆನ್ಸ್ ಗಳಿದ್ದು ಅದರಲ್ಲಿ ಹತ್ತನ್ನು ಎಮರ್ಜೆನ್ಸಿಗೆಂದು ಡೀಸಿ ಆಫೀಸ್ ಬಳಿ ಇರಿಸಿದ್ದಾರೆ. ಸಾಮಾನ್ಯ ಜನರು ತುರ್ತು ಅಗತ್ಯಕ್ಕೆ ಆಂಬುಲೆನ್ಸ್ ಸಿಗದೆ ಪರದಾಡುತ್ತಿದ್ದಾರೆ. ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಕನಿಷ್ಠ 50 ಆಂಬುಲೆನ್ಸ್ ಕೊಡಬೇಕು ಎಂದು ಮಾಜಿ ಎಂಎಲ್ಸಿ ಐವನ್ ಡಿಸೋಜ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಿಯಾದ ನೋಡಲ್ ಆಫೀಸರ್ ಇಲ್ಲ. ಆರೋಗ್ಯ ಮಿತ್ರ ಹೆಸರಿಗೆ ಮಾತ್ರ. ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಇದೆ, ಎಷ್ಟು ವೆಂಟಿಲೇಟರ್ ಇದೆ, ಎಷ್ಟು ಆಂಬುಲೆನ್ಸ್ ಇದೆ ಅಂದ್ರೆ ಜಿಲ್ಲಾಡಳಿತದಲ್ಲಿ ಉತ್ತರ ಇಲ್ಲ. ಕೋಟ್ಯಂತರ ದುಡ್ಡು ಖರ್ಚಾಗಿದೆ ಅಂತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಎಷ್ಟು ಖರ್ಚು ಮಾಡಿದ್ದೀರಿ ಎಂದು ಜಿಲ್ಲಾಡಳಿತ ಲೆಕ್ಕ ಕೊಡಲಿ ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದ್ದಾರೆ.
ರಾಜ್ಯದಲ್ಲೇ ಹೆಚ್ಚು ಮೆಡಿಕಲ್ ಕಾಲೇಜುಗಳಿರುವ ಮಂಗಳೂರಿನಲ್ಲಿ ಅತಿ ಹೆಚ್ಚು ಸಾವು ಸಂಭವಿಸ್ತಿದೆ. ಪಕ್ಕದ ಕೇರಳ ರಾಜ್ಯಕ್ಕಿಂತ ಹೆಚ್ಚು ನಮ್ಮ ಜಿಲ್ಲೆಯಲ್ಲಿ ಡೆತ್ ರೇಟಿಂಗ್ ಇದೆ. ಜಿಲ್ಲಾಡಳಿತ ಯಾಕೆ ರಾಂಡಮ್ ಟೆಸ್ಟ್ ಮಾಡಿಸುತ್ತಿಲ್ಲ. ಈಗ ಪುತ್ತೂರು, ಬೆಳ್ತಂಗಡಿ ಭಾಗಕ್ಕೆ ಕೊರೊನಾ ಹರಡಲು ಎಪಿಎಂಸಿ, ಮಂಗಳೂರಿನ ದಕ್ಕೆ ಕಾರಣ. ಇಂಥ ಜಾಗದಲ್ಲಿ ರಾಂಡಮ್ ಮಾಡಿದರೆ ಒಂದಷ್ಟು ಜಾಗೃತಿ ಆಗುತ್ತೆ. ಕೊರೊನಾದಿಂದ ಡೆತ್ ಆಗುವುದನ್ನು ತಪ್ಪಿಸಬಹುದು ಎಂದು ಸಲಹೆ ಮಾಡಿದ್ರು ಮಾಜಿ ಸಚಿವ ಯು.ಟಿ. ಖಾದರ್.