Connect with us

    KARNATAKA

    ವಯನಾಡು ದುರಂತದಿಂದ ಎಚ್ಚೆತ್ತ ಕರ್ನಾಟಕ ಸರ್ಕಾರ, ಪಶ್ಚಿಮಘಟ್ಟದಲ್ಲಿನ ಅಕ್ರಮ ರೆಸಾರ್ಟ್‌, ಅರಣ್ಯ ಒತ್ತುವರಿ ತೆರವಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ..!

    ಚಿಕ್ಕಮಗಳೂರು :  ಕೇರಳದ ವಯನಾಡಿನಲ್ಲಿ ನೂರಾರು ಜನರ ಸಾವಿಗೆ ಕಾರಣವಾದ  ಭೀಕರ ಪ್ರಾಕೃತಿಕ ದುರಂತ ಬಳಿಕ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು ಪಶ್ಚಿಮಘಟ್ಟದಲ್ಲಿನ ಅಕ್ರಮ ರೆಸಾರ್ಟ್‌, ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ರಚನೆ  ಅರಣ್ಯ ಇಲಾಖೆ ಮುಂದಾಗಿದ್ದು ಸೋಮವಾರದಿಂದಲೇ ಕಾರ್ಯಾಚರಣೆಗೆ ಸೂಚಿಸಲಾಗಿದೆ.

    ಪಶ್ಚಿಮ ಘಟ್ಟಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡ ಬಳಿಕ ಕರ್ನಾಟಕ ಅರಣ್ಯ ಇಲಾಖೆ  ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕದ ಅರಣ್ಯ, ಪರಿಸರದ ವಿಚಾರದಲ್ಲಿ ಸಂವೇದನ ಶೀಲವಾಗಿಯೇ ಸ್ಪಂದಿಸುವ ಹಾಗೂ ಖುದ್ದು ಸ್ಥಳ ಭೇಟಿ, ಮಾಹಿತಿ ಕಲೆ ಹಾಕುವ ಮೂಲಕ ಸಮಸ್ಯೆಗೆ ಪರಿಣಾಮತ್ಮಕವಾಗಿಯೇ ಪರಿಹಾರ ನೀಡುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕೂಡ ಕರ್ನಾಟಕದ ಪಶ್ಚಿಮ ಘಟ್ಟದ ವಿಚಾರದಲ್ಲಿ ಪ್ರಮುಖ ನಿರ್ಣಯ ಪ್ರಕಟಿಸಿದ್ದಾರೆ. ರಾಜ್ಯದ 10 ಜಿಲ್ಲೆಗಳಲ್ಲಿ ಆವರಿಸಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಂ ಸ್ಟೇ ಮತ್ತು ಇಲ್ಲಿನ ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲು ‘ಪಶ್ಚಿಮಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ’ ರಚಿಸಿರುವುದಾಗಿ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.ಈ ಸಂಬಂಧ ಮಾಧ್ಯ ಮಗಳಿಗೆ ಹೇಳಿಕೆ ನೀಡಿರುವ ಅವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯಪಡೆ ರಚಿಸಲಾಗಿದ್ದು,  ಸೋಮವಾರದಿಂದಲೇ ಪಶ್ಚಿಘಟ್ಟದಲ್ಲಿನ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ಧವೂ ಕ್ರಮ ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಸ್ತೆಗಳ ಮೇಲ್ದರ್ಜೆ, ವಿಸ್ತರಣೆಯ ವೇಳೆ ಅವೈಜ್ಞಾನಿಕವಾಗಿ 90ಡಿಗ್ರಿಗೆ ಗುಡ್ಡ ಕಡಿದಿರುವುದೂ ಕುಸಿತಕ್ಕೆ ಕಾರಣವಾಗಿದ್ದು, ಇಂತಹ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಎಂಜಿನಿಯರುಗಳಿಗೂ ನೋಟಿಸ್ ನೀಡಿ ಕ್ರಮ ಜರುಗಿಸಲು ನಿರ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ವಯನಾಡು ಮತ್ತು ಉತ್ತರ ಕನ್ನಡದ ಶಿರೂರಿನಲ್ಲಿ ಘೋರ ದುರಂತ ಸಂಭವಿಸಿದ್ದು ಜೀವಹಾನಿ ಆಗಿದೆ. ಸಹಸ್ರಾರು ವರ್ಷಗಳ ಗುಡ್ಡವೇ ಕಣ್ಮರೆಯಾಗಿದೆ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟಗಳಲ್ಲಿ ನಿರಂತರವಾಗಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
    ಸಚಿವ ಖಂಡ್ರೆ ಅಧಿಕಾರಿಗಳಿಗೆ ಕೊಟ್ಟ ಸೂಚನೆ ಏನು..?
    ಪಶ್ಚಿಮಘಟ್ಟದಲ್ಲಿನ ಅರಣ್ಯದಲ್ಲಿ 2015ರ ನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ಇಂದಿನಿಂದಲೇ ತೆರವು ಕಾರ್ಯಾಚರಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ
    ಎಸಿಎಫ್, ಡಿಸಿಎಫ್, ಸಿಎಫ್, ಸಿಸಿಎಫ್, ಎ.ಪಿ.ಸಿಸಿಎಫ್ ಗಳಿಗೂ ಅರಣ್ಯ ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಿ 64ಎ ಅಡಿಯಲ್ಲಿ ಆದೇಶ ನೀಡಲು ಅವಕಾಶವಿದ್ದು, ಬಾಕಿ ಇರುವ ಎಲ್ಲ 64 ಎ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಎಸಿಎಫ್ ಮೇಲ್ಪಟ್ಟ ದರ್ಜೆಯ ಎಲ್ಲ ಅಧಿಕಾರಿಗಳಿಗೂ ವಾರದಲ್ಲಿ ಎರಡು ದಿನ ತಮ್ಮ ತಮ್ಮ ವಲಯದಲ್ಲಿ ಪ್ರಕ್ರಿಯೆ ನಡೆಸಿ ತ್ವರಿತವಾಗಿ ಆದೇಶ ನೀಡಲು ಅವಕಾಶ ಮಾಡಿಕೊಡಲಾಗಿದೆ.
    ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಶ್ಚಿಮಘಟ್ಟ ಅರಣ್ಯ ಒತ್ತುವರಿ ಕಾರ್ಯಪಡೆಗೆ ಸೂಚಿಸಲಾಗಿದೆ.
    ಮೊದಲಿಗೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಅಕ್ರಮ ರೆಸಾರ್ಟ್, ಹೋಂಸ್ಟೇಗಳನ್ನು ತೆರವು ಮಾಡಿ, ಬಳಿಕ ತೋಟ, ಕಟ್ಟಡಗಳನ್ನು ತೆರವು ಮಾಡಲು ಸೂಚಿಸಲಾಗಿದೆ.
    ಎಲ್ಲರೂ ಕಾನೂನಿನ ಮುಂದೆ ಸಮಾನರು. ಪಶ್ಚಿಮ ಘಟ್ಟವನ್ನು ಒತ್ತುವರಿ ಮಾಡಿ ವಾಣಿಜ್ಯ ಚಟುವಟಿಕೆ ನಡೆಸುವವರಿಗೆ ಅವಕಾಶ ನೀಡುವುದಿಲ್ಲ. ಇಂಥಹ ಚಟುವಟಿಕೆಯಿಂದ ಪರಿಸರಕ್ಕೆ ಆಗುವ ಹಾನಿಯನ್ನು ಸರಿದೂಗಿಸಲು ಸಾಧ್ಯವಿಲ್ಲ.

    Share Information
    Advertisement
    Click to comment

    Leave a Reply

    Your email address will not be published. Required fields are marked *