LATEST NEWS
ಕಾರ್ಕಳ : ವಿಕ್ರಂ ಗೌಡ ಎನ್‌ಕೌಂಟರ್, ಜಯಂತ್ ಗೌಡನನ್ನು ಠಾಣೆ ಕರೆತಂದ ಪೊಲೀಸರ ಕ್ರಮಕ್ಕೆ ಗ್ರಾಮಸ್ಥರು ಗರಂ..!
ಕಾರ್ಕಳ : ನಕ್ಸಲ್ ವಾದಿ ವಿಕ್ರಂ ಗೌಡ ಎನ್‌ಕೌಂಟರ್ ಕುರಿತಂತೆ ಸ್ಥಳೀಯ ನಿವಾಸಿ ಜಯಂತ್ ಗೌಡನನ್ನು ವಿಚಾರಣೆಗಾಗಿ ಠಾಣೆ ಕರೆತಂದ ಪೊಲೀಸರ ಕ್ರಮಕ್ಕೆ ಗ್ರಾಮಸ್ಥರು, ಮತ್ತು ಮಲೆಕುಡಿಯ ಸಮಾಜದ ಪ್ರಮುಖರು ಗರಂ ಆಗಿ ಠಾಣೆಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆದಿದೆ.
ಹೆಬ್ರಿ ಕಬ್ಬಿನಾಲೆ ಅರಣ್ಯ ಪ್ರದೇಶದ ಪಿತಬೈಲುವಿನಲ್ಲಿ ನವೆಂಬರ್ 18ರಂದು ಎಎನ್‌ಎಫ್ ನಡೆಸಿದ ಎನ್ ಕೌಂಟರಿನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡ ನ ಕುರಿತು ವಿವರಣೆ ಪಡೆಯಲು ಎನ್‌ಕೌಂಟರ್ ನಡೆದ ಮನೆಯ ನಿವಾಸಿ ಜಯಂತ ಗೌಡರನ್ನು ಇಂದು ( ನ. 22) ಹೆಬ್ರಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಲೆಕುಡಿಯ ಸಮಾಜದ ಮುಖಂಡರು ಹಾಗೂ ಸ್ಥಳೀಯರು ಹೆಬ್ರಿ ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಜಯಂತ್ ಗೌಡ ಅವರು ಅಮಾಯಕರು ವಿಚಾರಣೆ ನೆಪದಲ್ಲಿ ಅವರಿಗೆ ಕಿರುಕುಳ , ಹಿಂಸೆ ಕೊಡಬಾರದೆಂದು ಒತ್ತಾಯಿಸಿದರು. ಅವರನ್ನು ಕೂಡಲೇ ಠಾಣೆಯಿಂದ ಬಿಡುಗಡೆ ಮಾಡದಿದ್ದಲ್ಲಿ ನಾವು ಪೊಲೀಸ್ ಠಾಣೆಯಿಂದ ನಿರ್ಗಮಿಸಲಾರೆವು ಎಂದು ಪಟ್ಟು ಹಿಡಿದರು. ಠಾಣಾಧಿಕಾರಿ ಮಹೇಶ್ ಟಿ. ಅವರು ಪ್ರತಿಭಟನಾಕಾರರನ್ನು ಸಮಾಧಅನ ಪಡಿಸಿಸಲು ಯತ್ನಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಯಂತ್ ಗೌಡ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದೇವೆ. ವಿಚಾರಣೆ ಮುಗಿದ ಬಳಿಕ ಮೇಲಾಧಿಕಾರಿಗಳ ಸೂಚನೆಯಂತೆ ಇವತ್ತೆ ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿದರು.
ಮಲೆ ಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು, ಉಡುಪಿ ಜಿಲ್ಲಾ ಮಲೆ ಕುಡಿಯ ಸಂಘದ ಅಧ್ಯಕ್ಷ ಗಂಗಾಧರ್ ಗೌಡ, ಪೂರ್ವಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಹೆಬ್ರಿ ಗ್ರಾ. ಪಂ. ತಾರನಾಥ್, ನಾಡ್ಪಾಲು ಗ್ರಾ. ಪಂ. ಅಧ್ಯಕ್ಷ ನವೀನ್ ಕುಮಾರ್, ವಿಜಯ ಶೆಟ್ಟಿ, ಸುಧಾಕರ್ ಹೆಗ್ಡೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.