LATEST NEWS
ನಿಂತಿದ್ದ ಬಸ್ ಗೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

ಕಾರ್ಕಳ ಮಾರ್ಚ್ 2 : ಬೈಕ್ ಒಂದು ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರ್ಗಾನ ಚರ್ಚ್ ಬಳಿ ನಿನ್ನೆ ರಾತ್ರಿ ಸಂಭವಿಸಿದೆ. ಮೃತರನ್ನು ಹಿರ್ಗಾನ ಗ್ರಾಮದ ಕಾನಂಗಿ ಬಳಿಯ ಅಂಕರಬೆಟ್ಟು ನಿವಾಸಿ ಮನೋಹರ್ (43) ಎಂದು ಗುರುತಿಸಲಾಗಿದೆ.
ಕಾರ್ಕಳದಿಂದ ಹೋಗುತ್ತಿದ್ದ ಖಾಸಗಿ ಬಸ್ ಚಾಲಕ ಹಿರ್ಗಾನ ಚರ್ಚ್ ಬಳಿ ಪ್ರಯಾಣಿಕರನ್ನು ಇಳಿಸುವ ನಿಟ್ಟಿನಲ್ಲಿ ಬಸ್ ನಿಲ್ಲಿಸಿದ್ದು, ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮನೋಹರ್ ಅವರು ಈ ತಿಂಗಳು ಉದ್ಯೋಗ ನಿಮಿತ್ತ ವಿದೇಶ ತೆರಳಲಿದ್ದರು. ಹೀಗಾಗಿ ಫೆಬ್ರವರಿ 28ರಂದು ಮಂಗಳೂರಿನಲ್ಲಿ ಮೆಡಿಕಲ್ ಚೆಕ್‌ಅಪ್ ಮಾಡಿಸಿದ್ದರು. ಅದರ ರಿಪೋರ್ಟ್ ತರಲು ಬುಧವಾರ ಮಂಗಳೂರಿಗೆ ತೆರಳಿದ್ದು ಅಲ್ಲಿಂದ ವಾಪಾಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.