LATEST NEWS
ಕರಾವಳಿಯಲ್ಲಿ ಟ್ರೆಂಡ್ ಆದ ‘ಕರಿಯಜ್ಜೆ’ ಹಾಡು ಪುಟಾಣಿ ಕಾರ್ತಿಕ್ ಧ್ವನಿಗೆ ಫಿದಾ ಆದ ಜನ
ಮಂಗಳೂರು ನವೆಂಬರ್ 16: ಕರಾವಳಿ ಜನತೆಯ ಆರಾಧ್ಯ ದೈವ ಕೊರಗಜ್ಜನ ಬಗ್ಗೆ ಸಣ್ಣ ಬಾಲಕನೊಬ್ಬ ಹಾಡಿರುವ ಹಾಡು ಈಗ ಕರಾವಳಿಯಲ್ಲಿ ಟ್ರೆಂಡ್ ಆಗಿದೆ. ವಿಶ್ವದಾದ್ಯಂತ ಇರುವ ಕರಾವಳಿಗಳ ಮನಸೂರೆಗೊಳಿಸಿದ ಈ ಪುಟಾಣಿ ಬಾಲಕ ಕಾರ್ತಿಕ್ ನ ಹಾಡು ಯ್ಯೂಟ್ಯೂಬ್ ನಲ್ಲಿ ಈಗಾಗಲೇ 4 ಲಕ್ಷಕ್ಕೂ ಅಧಿಕ ವಿಕ್ಷಣೆ ಕಂಡಿದೆ.
ಕಾರ್ಕಳ ಹಿರ್ಗಾನ ಗ್ರಾಮದ ನುಜೂರು ಪೂವಪ್ಪ-ಲೋಲಾಕ್ಷಿ ದಂಪತಿಯ 7ವರ್ಷದ ಮಗ ಕಾರ್ತಿಕ್ ಈ ಹಾಡನ್ನು ಹಾಡಿರುವ ಬಾಲಕ. ಇನ್ನೂ 7 ವರ್ಷ ಪ್ರಾಯದ ಕಾರ್ತಿಕೆಗೆ ಅಕ್ಷರಾಭ್ಯಾಸವೂ ವಿಶೇಷವಾಗಿ ಇಲ್ಲ, ಅಲ್ಲದೆ ಸಂಗೀತ ಜ್ಞಾನ ಕೂಡ ಸ್ವಲ್ಪವೂ ಇಲ್ಲ ಆದರೂ ಭಕ್ತಿಗೀತೆಯನ್ನು ಆತ ಹಾಡಿರುವ ರೀತಿ ಜನರನ್ನು ನಿಬ್ಬೆರಗುಗೊಳಿಸಿದೆ. ಈತನಿಗೆ ಬಾಲ್ಯದಿಂದಲೂ ಭಕ್ತಿಗೀತೆ ಹಾಡುವ ಹವ್ಯಾಸ ಇದ್ದು, ಈ ಹಿಂದೆ ಮಂತ್ರದೇವತೆ ಸೇರಿದಂತೆ ನಾನಾ ಭಕ್ತಿಗೀತೆಗಳನ್ನು ಕೂಡ ಹಾಡಿದ್ದಾನೆ. ತನ್ನ ಅಕ್ಕ ರಕ್ಷಿತಾಳ ಮೊಬೈಲ್ ಸಹಾಯದಿಂದ ಸಂಗೀತ ಜ್ಞಾನವನ್ನು ಅರಿತುಕೊಂಡಿದ್ದಾನೆ.
ಮಾ. ಕಾರ್ತಿಕ್ ಹಾಡಿದ ಕಡಲಪುಡೆತ ಉಡಲಗೇನ ತುಡರ್ ಈ ಅಜ್ಜ… ಆ ಸತ್ಯದ ಹಾದಿಗ್… ಧರ್ಮೊದ ಸಾದಿಗ್ ಪುದರ್ ಕೊರಗಜ್ಜ… ಹಾಡನ್ನು ಆತನ ಅಕ್ಕ ರಕ್ಷಿತಾ ಸ್ಟೇಟಸ್‌ನಲ್ಲಿಹಾಕಿದ್ದರು. ಈ ಹಾಡಿಗೆ ಮರುಳಾದ ಸಂಬಂಧಿಕರು ಅದನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಹಾಡು ಕೆಲವೇ ಕೆಲವು ಗಂಟೆಗಳಲ್ಲಿಸೂಪರ್ ಹಿಟ್ ಆಗಿ ನೂರಾರು ಮಂದಿ ಶೇರ್, ಲೈಕ್ ಮಾಡಿದರು.
ಮಾ. ಕಾರ್ತಿಕ್ ಬಡಕುಟುಂಬದಲ್ಲಿಜನಿಸಿದ್ದು ತಂದೆ ಕೂಲಿ, ತಾಯಿ ಈತನ ಆರೈಕೆಯಲ್ಲೇ ತೊಡಗಿದ್ದಾರೆ. ಅಕ್ಕ ಮನೆಯಲ್ಲೇ ಇದ್ದಾರೆ. ಕಾರ್ತಿಕ್ ಹಾಡು ವೈರಲ್ ಆಗುತ್ತಿದ್ದಂತೆ ಆತನ ಮನೆಗೆ ಅಭಿಮಾನಿಗಳ ದಂಡೇ ಬರಲು ಆರಂಭಿಸಿವೆ. ಸಂಗೀತ, ಅಕ್ಷರ ಜ್ಞಾನವೇ ಇಲ್ಲದ ಬಾಲಕನ ಈ ಸಾಧನೆಗೆ ಎಲ್ಲೆಡೆಯಿಂದ ಸನ್ಮಾನ, ಅಭಿನಂದನೆ ಕರೆಗಳು ಬರುತ್ತಿವೆ. ಆತನ ಶಿಕ್ಷಣ, ಆರೋಗ್ಯಕ್ಕೆ ಸಹಾಯ ಹಸ್ತಚಾಚುವ ಭರವಸೆಗಳು ಕೇಳಿ ಬರುತ್ತಿವೆ.
ಡಮರುಗ ಮ್ಯಾಜಿಕಲ್ ಸೌಂಡ್ ತಂಡ ಬಾಲಕನ ಕಲೆಗೆ ಪ್ರೋತ್ಸಾಹ ನೀಡಿ, ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಹಾಡನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿಹರಿಯಬಿಟ್ಟಿದೆ. ಇದನ್ನು ಕೇವಲ ಒಂದೇ ವಾರದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡಿನಲ್ಲಿ ಮಾ. ಕಾರ್ತಿಕ್‌ನ ಜತೆ ಚೈತ್ರಾ ಕಲ್ಲಡ್ಕ ಸಹಗಾಯಕಿಯಾಗಿದ್ದಾರೆ. ಹಾಡಿಗೆ ಜಿ.ಎಸ್. ಗುರುಪುರ ಸಾಹಿತ್ಯ ನೀಡಿದರೆ, ಪ್ರಸಾದ್ ಕೊಳಂಬೆ ವಿಡಿಯೋ ಸಂಕಲನ, ಚೇತನ್ ಕಲ್ಲಡ್ಕ ತಂಡಕ್ಕೆ ಸಹಕಾರ ನೀಡಿದ್ದಾರೆ.
ಒಟ್ಟಿನಲ್ಲಿ 7 ವರ್ಷದ ಬಾಲಕ ಮಾ. ಕಾರ್ತಿಕ್ ಹಾಡಿದ ಈ ಹಾಡು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದ್ದು, ಈತನ ಕಂಠಕ್ಕೆ ಎಲ್ಲರೂ ಮನಸೋತಿದ್ದಾರೆ.