BANTWAL
ಕಾಂತಾರ ಎಫೆಕ್ಟ್ , ಉಕ್ರೇನ್ ದಂಪತಿಗಳಿಗೆ ಒಲಿದ ತುಳುನಾಡಿನ ದೈವ
ಬಂಟ್ವಾಳ, ನವೆಂಬರ್ 12: ಕಾಂತಾರ ಸಿನಿಮಾದ ಮೂಲಕ ತುಳುನಾಡಿನ ದೈವಗಳ ಮಹತ್ವ ಜಗತ್ತಿನೆಲ್ಲೆಡೆ ಪಸರಿಸುತ್ತಿರುವ ಬೆನ್ನಲ್ಲೇ ಉಕ್ರೇನ್ ನ ಕುಟುಂಬವೊಂದು ಶುಕ್ರವಾರ ರಾತ್ರಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊರಗಜ್ಜನ ಕೋಲದಲ್ಲಿ ಹೇಳಿದ್ದ ಹರಕೆಯನ್ನು ತೀರಿಸಿರುವ ಕುಟುಂಬ ಇದೀಗ ಸಂತೃಪ್ತ ಮನೋಭಾವದೊಂದಿಗೆ ಉಕ್ರೇನ್ ಗೆ ಹೊರಡಲು ಸಜ್ಜಾಗಿ ನಿಂತಿದೆ.
ಕಳೆದ ಕೆಲ ತಿಂಗಳ ಹಿಂದೆ ಉಕ್ರೇನ್ ನಿಂದ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್ ಪ್ರಜೆಗಳಾದ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದ ಈ ಕುಟುಂಬ ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್ ಪ್ರಭೂಜಿಯವರನ್ನು ಭೇಟಿ ಮಾಡಿದ್ದರು.
ಈ ಸಂದರ್ಭ ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ವಿಚಾರವನ್ನು ಉಕ್ರೇನ್ ದಂಪತಿ ಗುರೂಜಿಯವರಲ್ಲಿ ತಿಳಿಸಿದ್ದು, ಅದರಂತೆ ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ಆರಂಭಿಸಿದ್ದರು. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಗೋವಿನ ತೋಟದ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿ ವಾಸ್ತವ್ಯ ಇದ್ದರು. ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಕೋರಿಕೊಂಡಿದ್ದರಲ್ಲದೆ, ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು.
ಇದೀಗ ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆ ಈ ಕುಟುಂಬ ಶುಕ್ರವಾರ ರಾತ್ರಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಭಕ್ತಿಭೂಷಣ್ ದಾಸ್ ಪ್ರಭೂಜಿ, ಪದ್ಮನಾಭ ಗೋವಿನ ತೋಟ, ರಾಮಚಂದ್ರ ಮಾರಿಪಳ್ಳ, ಯಾದವ ಕೊಡಂಗೆ, ನವೀನ್ ಮಾರ್ಲ ಮೊದಲಾದವರ ಉಪಸ್ಥಿತಿಯಲ್ಲಿ ಅಗೇಲು ಸೇವೆ ನಡೆದಿದ್ದು, ಉಕ್ರೇನ್ ಕುಟುಂಬವೂ ಸಂತೃಪ್ತ ಮನೋಭಾವದಿಂದ ಭಾಗವಹಿಸಿತ್ತು. ಈ ಕುಟುಂಬ ಇನ್ನೆರಡು ದಿನದಲ್ಲಿ ಟರ್ಕಿಗೆ ಪಯಣಿಸಿ, ಬಳಿಕ ತಮ್ಮ ತವರು ಉಕ್ರೇನ್ ಗೆ ಪಯಣ ಬೆಳೆಸಲಿದ್ದಾರೆ.