KARNATAKA
ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ್ದ ಎಸ್ ಬಿಐ ಬ್ಯಾಂಕ್ ಮ್ಯಾನೆಜರ್ ಎತ್ತಂಗಡಿ

ಬೆಂಗಳೂರು, ಮೇ 21: ಬ್ಯಾಂಕ್ ಗೆ ಬಂದ ಗ್ರಾಹಕರ ಜೊತೆ ವ್ಯವಹರಿಸುವ ವೇಳೆ ಕನ್ನಡ ಗೊತ್ತಿಲ್ಲ ನಾನು ಹಿಂದಿಯಲ್ಲೇ ಮಾತನಾಡೋದು ಎಂದು ದರ್ಪ ತೋರಿದ್ದ ಆನೇಕಲ್ (Anekal) ತಾಲೂಕಿನ ಚಂದಾಪುರದ ಎಸ್‌ಬಿಐ ಬ್ಯಾಂಕ್ನ ಮ್ಯಾನೆಜರ್ ನ್ನು ಎತ್ತಂಗಡಿ ಮಾಡಲಾಗಿದೆ.
ಚಂದಾಪುರದ ಎಸ್‌ಬಿಐ ಬ್ಯಾಂಕ್ಗೆ ಕೆಲಸ ನಿಮಿತ್ತ ಗ್ರಾಹಕರೊಬ್ಬರು ಹೋಗಿದ್ದರು. ಬ್ಯಾಂಕ್ನ ಮಹಿಳಾ ಮ್ಯಾನೇಜರ್, ಗ್ರಾಹಕರ ಜೊತೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ, ಗ್ರಾಹಕ ಕನ್ನಡದಲ್ಲಿ ಮಾತನಾಡಿ ಎಂದಿದ್ದಾರೆ. ಆಗ, ಬ್ಯಾಂಕ್ ಮ್ಯಾನೇಜರ್ ಗಾಹಕರಿಗೆ ಹಿಂದಿಯಲ್ಲಿ ಮಾತನಾಡುವಂತೆ ಹೇಳಿದ್ದು, ಇದು ಭಾರತ ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸುವಂತ ಹೇಳಿಕೆ ನೀಡಿದ್ದಾರೆ.

ಇನ್ನು, ಬ್ಯಾಂಕ್ ಮ್ಯಾನೇಜರ್ ದರ್ಪ ತೋರಿರುವ ದೃಶ್ಯವನ್ನು ಗ್ರಾಹಕ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ಯಾಂಕ್ ಮ್ಯಾನೇಜರ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು, ಈ ವಿಚಾರ ತಿಳಿಯುತ್ತಿದ್ದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಚಂದಾಪುರ SBI ಬ್ಯಾಂಕ್ ಶಾಖೆಗೆ ತೆರಳಿ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಮ್ಯಾನೇಜರ್ ಸ್ಥಳಕ್ಕೆ ಬರಬೇಕು. ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ಬ್ಯಾಂಕ್ ಒಳಗೆ ನುಗ್ಗಿ ದಾಖಲೆ ಪತ್ರಗಳನ್ನು ಹರಿದು ಹಾಕಿ ಅಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರ ಆಕ್ರೋಶಕ್ಕೆ ಬ್ಯಾಂಕ್ನ ಮಹಿಳಾ ಮ್ಯಾನೇಜರ್ರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ. ಹೊರ ರಾಜ್ಯಕ್ಕೆ ವರ್ಗಾವಣೆಗೊಳಿಸಿ ಮಂಗಳವಾರ ರಾತ್ರಿಯೇ ಆದೇಶ ಹೊರಡಿಸಲಾಗಿದೆ. ಕನ್ನಡಿಗರ ಪ್ರತಿಭಟನೆಯ ಭೀತಿಯಿಂದ ಬ್ಯಾಂಕ್ ಮ್ಯಾನೇಜರ್ ಕ್ಷಮೆ ಕೇಳಿದ್ದಾರೆ.
ಈ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿ ಎಸ್ ಬಿಐ ಮ್ಯಾನೆಜರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. “ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸುತ್ತಿರುವುದು ತೀವ್ರವಾಗಿ ಖಂಡನೀಯ. ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಬಹುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
“ಆದಾಗ್ಯೂ, ಅಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಭಾರತದಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ನಾನು ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.