FILM
ಡ್ರಗ್ಸ್ ದಂಧೆ ಸ್ಯಾಂಡಲ್ ವುಡ್ ನಟಿ ರಾಗಿಣಿ ಸಿಸಿಬಿ ವಶಕ್ಕೆ

ಬೆಂಗಳೂರು: ಬೆಂಗಳೂರು ಡ್ರಗ್ಸ್ ದಂಧೆ ಪ್ರಕರಣದ ಹಿನ್ನಲೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದಾರೆ. ಇಂದು ಬೆಳ್ಳಂಬೆಳಗ್ಗೆ 6.35ಕ್ಕೆ ಸಿಸಿಬಿ ಇನ್ಸ್ ಪೆಕ್ಟರ್ ಅಂಜುಮಾಲಾ ಅವರ ನೇತೃತ್ವದಲ್ಲಿ ರಾಗಿಣಿ ಅವರ ಯಲಹಂಕದ ಜ್ಯುಡಿಷಿನಲ್ ಲೇಔಟ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಮುಂಜಾನೆಯೇ ಆರಂಭವಾದ ತಪಾಸಣೆ ಬೆಳಗ್ಗೆ 10.15ರವರೆಗೂ ಮುಂದುವರಿದಿತ್ತು. ಮನೆಯ ಪ್ರತಿ ಮೂಲೆ ಮೂಲೆಯನ್ನೂ ತೀವ್ರವಾಗಿ ಪರಿಶೀಲಿಸಿದ ಬಳಿಕ ಕೆಲವು ಮಹತ್ವದ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಬಳಿಕ ರಾಗಿಣಿ ಅವರನ್ನು ವಶಕ್ಕೆ ಪಡೆದು, ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಅಧಿಕಾರಿಗಳ ಇನ್ನಷ್ಟು ಪ್ರಶ್ನೆಗಳಿಗೆ ರಾಗಿಣಿ ಉತ್ತರಿಸಬೇಕಿದೆ. ಸತತ 3 ಗಂಟೆ ಶೋಧ ಕಾರ್ಯ ಬಳಿಕ ಮನೆ ಕೀ, ಕಾರು ಕೀ, ಮೊಬೈಲ್ ಅನ್ನು ವಶಕ್ಕೆ ಪಡೆದು ರಾಗಿಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗುರುವಾರವೇ ಸಿಸಿಬಿ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗವಂತೆ ಈ ಹಿಂದೆಯೇ ರಾಗಿಣಿಗೆ ನೋಟಿಸ್ ನೀಡಲಾಗಿತ್ತು. ಆದರೆ ಕೆಲವು ಕಾರಣಗಳನ್ನು ನೀಡಿ ಅವರು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ರಾಗಿಣಿ ಅವರ ಆಪ್ತ ರವಿಶಂಕರ್ ಅವರಿಂದಲೂ ಅನೇಕ ಮಾಹಿತಿಗಳನ್ನು ಕಲೆ ಹಾಕಿದ ಬಳಿಕ ಅಧಿಕಾರಿಗಳು ತಕ್ಷಣವೇ ಈ ದಾಳಿ ನಡೆಸಿದ್ದಾರೆ. ಇನ್ನಷ್ಟು ನಟಿಯರ ಹೆಸರು ಕೂಡ ಹೊರಬರುವ ಸಾಧ್ಯತೆ ದಟ್ಟವಾಗಿದೆ.