Connect with us

LATEST NEWS

ಮೈಸೂರು ದಸರಾ ಹಬ್ಬದಲ್ಲಿ ಕಂಬಳ ಕ್ರೀಡೆ ಸೇರ್ಪಡೆ: ಡಿಸಿಎಂ ಡಿ.ಕೆ.ಶಿವಕುಮಾರ್

ಮಂಗಳೂರು ಎಪ್ರಿಲ್ 13: ಮುಂಬರುವ ನಾಡಹಬ್ಬ ಮೈಸೂರು ದಸರಾ ಹಬ್ಬದಲ್ಲಿ ಕಂಬಳ ಕ್ರೀಡೆಯನ್ನು ಸೇರ್ಪಡೆ ಮಾಡಲು ನಾವು ತೀರ್ಮಾನ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಯವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಚರ್ಚೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ದ್ವಿತೀಯ ವರ್ಷದ ಹೊನಲು ಬೆಳಕಿನ ಮೂಳೂರು- ಅಡ್ಡೂರು ಜೋಡುಕೆರೆ ಕಂಬಳ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.


“ಈ ಬಾರಿಯ ದಸರಾ ಸಮಿತಿಯ ಉಪಾಧ್ಯಕ್ಷನಾಗಿದ್ದೇನೆ. ದಸರಾ ಹಬ್ಬದಲ್ಲಿ ಇನ್ನು ಮುಂದೆ ಕಂಬಳ ದಕ್ಷಿಣ ಕನ್ನಡದ ಪರಂಪರೆಯಗಿ ಮುಂದುವರೆಯಲಿದೆ. ಮೂರು ಎಕರೆ ಪ್ರದೇಶದಲ್ಲಿ ಕಂಬಳ ಕೆರೆ ನಿರ್ಮಾಣ ಮಾಡುವ ಆಲೋಚನೆಯಿದೆ. ಇದರಿಂದ 25 ಸಾವಿರಕ್ಕೂ ಹೆಚ್ಚು ‌ಜನ ಕಂಬಳ ವೀಕ್ಷಣೆ ಮಾಡಬಹುದು. ನೀವೆಲ್ಲರು ಸೇರಿದರೆ ಸರ್ಕಾರದಿಂದ ಸಹಕಾರ ನೀಡಲಾಗುವುದು. ಕಂಬಳವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಎಲ್ಲರು ಬೆಳೆಸೋಣ” ಎಂದು ಹೇಳಿದರು.

“ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆಯಾದ ಬ್ಯಾಂಕ್ ಗಳಿಂದ ಇಡೀ ದೇಶಕ್ಕೆ ಆರ್ಥಿಕ ಅಡಿಪಾಯ ಸೃಷ್ಟಿಯಾಯಿತು. ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾದ ಶ್ರೀಮಂತಿಕೆ ಯಾವ ಜಿಲ್ಲೆಯಲ್ಲಿಯೂ ಇಲ್ಲ. ಕಂಬಳದ ಮೂಲಕ ಇಡೀ ದೇಶದಲ್ಲಿಯೇ ಸಾಂಸ್ಕೃತಿಕವಾಗಿ ಸಾಕ್ಷಿಗುಡ್ಡೆಯನ್ನು ಕಂಬಳ ಕ್ರೀಡೆ ನಿರ್ಮಾಣ ಮಾಡಿದೆ” ಎಂದರು.

“ಈ ಜಿಲ್ಲೆಯ ಧಾರ್ಮಿಕಯೇ ನಿಮ್ಮ ಶಕ್ತಿ. ಹಲವಾರು ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಈ ಜಿಲ್ಲೆಯಲ್ಲಿವೆ. ಈ ಜಿಲ್ಲೆಯ ಯುವಕರ ಬುದ್ಧಿವಂತಿಕೆ ಬೇರೆ ದೇಶಗಳಿಗೆ ಹೋಗುತ್ತಿದೆ. ಇದು ತಪ್ಪಬೇಕು. ಈ ಜಿಲ್ಲೆಗೆ ಪ್ರವಾಸಿ ಕ್ಷೇತ್ರದಲ್ಲಿ ಅತ್ಯಂತ ಅವಕಾಶವಿದೆ. ಇತ್ತೀಚೆಗೆ ಸದನದಲ್ಲಿ ಮಾತನಾಡುತ್ತ ಈ ಭಾಗದ ಶಾಸಕರ ಜೊತೆ ಚರ್ಚೆ ಮಾಡುವಂತೆ ತಿಳಿಸಿದ್ದೆ. ಇಡೀ ದೇಶದ ಯಾವ ರಾಜ್ಯಗಳಿಗೂ ಇಲ್ಲದ ಅತ್ಯಂತ ಉದ್ದದ ಕರಾವಳಿ ನಿಮಗಿದೆ. ಸದ್ಯದಲ್ಲಿಯೇ ಎರಡು ಜಿಲ್ಲೆಗಳ ಶಾಸಕರ ಸಭೆ ನಡೆಸಲಾಗುವುದು” ಎಂದರು.

“ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಪಾಲಿಸಿಗಳನ್ನು ತಂದು ಯುವಕರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಇದು ಒಂದು ಪಕ್ಷದ ಜಾತಿಯ,‌ ಧರ್ಮದ ವಿಚಾರವಲ್ಲ. ಇಡೀ ಜಿಲ್ಲೆಯ ಜನರ ಬದುಕಿನ ವಿಚಾರ. ನೀರಿಗೆ, ಭೂಮಿಗೆ, ಬೆಳಕಿಗೆ ಯಾವುದೇ ಜಾತಿಯಿಲ್ಲ” ಎಂದರು.

“ಮನುಷ್ಯ ಸೋಲುವುದು ಕಲಿತಾಗ ಮಾತ್ರ ಗೆಲ್ಲಲು ಸಾಧ್ಯ. ಕ್ರೀಡೆಯಲ್ಲಿ ಮನುಷ್ಯನ ಗಾತ್ರ ಮುಖ್ಯವಲ್ಲ, ಹೃದಯವಂತಿಕೆ ಮುಖ್ಯ. ಕೋಣಗಳ ಮನಸ್ಸನ್ನು ಗೆದ್ದರೆ ಮಾತ್ರ ಸ್ಪರ್ಧಿ ಕಂಬಳ ಗೆಲ್ಲಲು ಸಾಧ್ಯ. ಕಂಬಳಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ದ. ಕಂಬಳಕ್ಕೆ ಯಾವುದೇ ಜಾತಿ,‌ಧರ್ಮವಿಲ್ಲ ಇಲ್ಲಿರುವುದು ಧಾರ್ಮಿಕ ಆಚರಣೆ, ಕ್ರೀಡೆ ಹಾಗೂ ಸಂಸ್ಕೃತಿ” ಎಂದು ಹೇಳಿದರು.

“ಕಳೆದ ವರ್ಷ ಶಾಸಕರಾದ ಅಶೋಕ್ ರೈ ಅವರು ಬೆಂಗಳೂರು ಕಂಬಳವನ್ನು ಆಯೋಜಿಸಿ ಇತಿಹಾಸ ಸೃಷ್ಟಿಸಿದ್ದರು. ಇನಾಯತ್ ಅಲಿ ಅವರು ಸರ್ವಧರ್ಮಗಳನ್ನು ಸೇರಿಸಿ ಕಂಬಳದಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ” ಎಂದು ಹೇಳಿದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *