KARNATAKA
ತೈಲ ದರ ಹೆಚ್ಚಾದರೂ ಚಿಂತೆಯಿಲ್ಲ ಎನ್ನುವವರಿಗೆ ಲೀಟರಿಗೆ 1 ಸಾವಿರ ದರ ವಿಧಿಸಿ : ಯು.ಟಿ. ಖಾದರ್
ಚಾಮರಾಜನಗರ: ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದರೂ ಪ್ರಧಾನಿ ಮೋದಿ ಅವರ ಅಂಧ ಭಕ್ತರು ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದರೂ ಚಿಂತೆಯಿಲ್ಲ ಎನ್ನುತ್ತಿದ್ದಾರೆ. ಅಂಥವರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ತೆರೆದು ಒಂದು ಲೀಟರ್ ಪೆಟ್ರೋಲ್ ಗೆ 1 ಸಾವಿರ ರೂ. ದರ ವಿಧಿಸಿ, ನಮ್ಮ ಅಭ್ಯಂತರವೇನಿಲ್ಲ! ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಕಿಡಿಕಾರಿದರು.
ಚಾಮರಾಜನಗರದ ಶಿವಕುಮಾರಸ್ವಾಮಿ ಭವನದ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಖಾದರ್ ಪೆಟ್ರೋಲ್ 100 ರೂಗೆ ಏರಿಕೆಯಾಗಿದ್ದು, ಡೀಸೆಲ್ 85 ಆಗಿದೆ. ಅಲ್ಲದೆ ಬಂಗಾರದ ಬೆಲೆ 40 ಸಾವಿರ ರೂ. ಏರಿದೆ. ಬಡವರು ಕನಿಷ್ಟ 3 ಪವನ್ ಚಿನ್ನ ಹಾಕಿ ಕಷ್ಟ ಪಟ್ಟು ಮದುವೆ ಮಾಡುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ 1 ಪವನ್‌ಗಿಂತ ಜಾಸ್ತಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ವಾಭಿಮಾನದಿಂದ ಮದುವೆ ಮಾಡಲು ಸಾಧ್ಯವಾಗುತ್ತಿಲ್ಲ. ದುಡಿಯುವ ವರ್ಗ ಹೋಟೆಲ್‌ನಲ್ಲಿ 30 ರೂ.ಗೆ ಊಟ ಮಾಡುತ್ತಿದ್ದವರು 50 ರೂ. ಕೊಡಬೇಕಾಗಿದೆ. ವೇತನ ಕೂಡ ಜಾಸ್ತಿಯಾಗುತ್ತಿಲ್ಲ ಎಂದು ಅವರು ಟೀಕಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದು ಜನಪರವಾದ ಕಾರ್ಯಕ್ರಮ ಬರಲಿಲ್ಲ. ಮಾನವೀಯತೆ, ಕರುಣೆ ಇಲ್ಲದ ಜನವಿರೋಧಿ ಸರ್ಕಾರಗಳಿವು. ಜನರ ಪರವಾಗಿ ಒಂದೇ ಒಂದು ಕಾರ್ಯಕ್ರಮನೀಡಿಲ್ಲ. ಇಂಥ ಜನವಿರೋಧಿ ಸರ್ಕಾರವನ್ನು ಧಿಕ್ಕರಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದರು.