LATEST NEWS
ಡೆಡ್ಲಿ ವೈರಸ್ ಬಗ್ಗೆ ಶಾಸಕ ಯು.ಟಿ ಖಾದರ್ ನಿರ್ಲಕ್ಷ್ಯ; ಪಿಪಿಇ ಕಿಟ್ ಧರಿಸದೇ ಕೊರೊನಾ ಸೊಂಕಿತನ ಅಂತ್ಯಸಂಸ್ಕಾರದಲ್ಲಿ ಭಾಗಿ
ಮಂಗಳೂರು ಜೂನ್ 24: ಇಡೀ ದೇಶವೇ ಕೊರೊನಾ ವಿರುದ್ದ ಹೊರಾಡುತ್ತಿದ್ದು, ಮಾಸ್ಕ್ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸಲು ಸರಕಾರ ಹೊರಟಿದೆ. ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಈ ಕಾನೂನುಗಳು ಅನ್ವಯವಾಗುವುದಿಲ್ಲ ಎನ್ನುವುದುಕ್ಕೆ ಒಂದೊಳ್ಳೆ ಉದಾಹರಣೆ ಮಾಜಿ ಆರೋಗ್ಯ ಸಚಿವ ಶಾಸಕ ಯು.ಟಿ ಖಾದರ್.
ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯಸಂಸ್ಕಾರ ಸಂದರ್ಭ ಪಿಪಿಇ ಕಿಟ್ ಧರಿಸದೇ ಶಾಸಕ ಯು.ಟಿ. ಖಾದರ್ ಭಾಗವಹಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಮಂಗಳವಾರ 70 ವರ್ಷದ ವೃದ್ಧ, ರೋಗಿ 6282 ರೋಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧ ಜೂನ್ 7 ರಂದು ಬೆಂಗಳೂರಿನಿಂದ ಆಗಮಿಸಿದ್ದು, ಜೂನ್ 12 ರಂದು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ವೇಳೆ ಅಂತ್ಯ ಸಂಸ್ಕಾರವನ್ನು ಮಂಗಳೂರಿನ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ನಡೆಸಲಾಯಿತು. ಈ ಸಂದರ್ಭ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಶಾಸಕ ಖಾದರ್ ಕೂಡ ಅಂತ್ಯಸಂಸ್ಕಾರ ಕಾರ್ಯ ಮಾಡಿದ್ದಾರೆ. ಖಾದರ್ ಮಸೀದಿ ಭೂಮಿಯಲ್ಲಿ ಗುಂಡಿ ತೆಗೆದು ಸ್ವತಃ ಮೃತದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸ ಮಾಡಿದ್ದಾರೆ. ಆದರೆ ಈ ವೇಳೆ ಪಿಪಿಇ ಕಿಟ್ ಧರಿಸದೇ ಅಂತ್ಯ ಸಂಸ್ಕಾರ ಕಾರ್ಯ ನಡೆಸಿದ್ದಾರೆ.
ಕೊರೊನಾ ಸೋಂಕಿತನ ಅಂತ್ಯಸಂಸ್ಕಾರ ಮಾಡುವಾಗ ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರು. ಆದರೆ ಶಾಶಕ ಖಾದರ್ ಪಿಪಿಇ ಕಿಟ್ ಧರಿಸಿಲ್ಲ. ಹೀಗಾಗಿ ಖಾದರ್ ಡೆಡ್ಲಿ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಕೊರೊನಾ ಸೊಂಕಿತರು ಮೃತಪಟ್ಟರೆ ಜಿಲ್ಲಾಡಳಿತ ಅವರ ಮನೆಯವರಿಗೂ ಮೃತರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲ್ಲ. ಆದರೆ ಜನಪ್ರತಿನಿಧಿಯೊಬ್ಬರಿಗೆ ಹೇಗೆ ಅವಕಾಶ ನೀಡಿತು ಎನ್ನುವುದು ಇಲ್ಲಿ ಪ್ರಶ್ನೆಯಾಗಿದೆ. ಜನ ಸಾಮಾನ್ಯ ಮಾಸ್ಕ್ ಧರಿಸದೇ ಇದ್ದರೆ 200 ರೂಪಾಯಿ ದಂಡ ವಿಧಿಸುವ ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಯೊಬ್ಬರ ಈ ನಿರ್ಲಕ್ಷ್ಯತನ ಕಣ್ಣಿಗೆ ಕಾಣಿಸಲೇ ಇಲ್ಲ.