Connect with us

    DAKSHINA KANNADA

    ಪೊರಕೆ ಹಿಡಿದು ಕಸ ಗುಡಿಸಿದ ಉಪ ತಹಶೀಲ್ದಾರ್!

    ಕಡಬ, ಮಾರ್ಚ್ 07: ಸರಕಾರಿ ಕಛೇರಿಗಳಲ್ಲಿ ಮೇಲಾಧಿಕಾರಿಗಳು ಬೆಲ್ ಹಾಕಿ ಜವಾನರನ್ನು ಕರೆದು ಚಾ ತಿಂಡಿ, ತರುವದಕ್ಕೋ, ಕಡತ ತರುವುದಕ್ಕೋ ಆದೇಶಿಸುವ ಈ ಜಮಾನದಲ್ಲಿ, ಯಾವುದೇ ಇಗೋ ಇಲ್ಲದೆ ತಾನೇ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಕಡಬ ತಾಲೂಕು ಉಪತಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಅವರು ಇತರರಿಗೆ ಮಾದರಿಯಾಗಿದ್ದಾರೆ.

    ತಾನು ಉಪತಹಸೀಲ್ದಾರ್ ಆದರೂ ಸರಳತೆಯನ್ನು ಮೈಗೂಡಿಸಿಕೊಂಡಿರುವ ಗೋಪಾಲ್ ಅವರು ಕಚೇರಿಗೆ ಸರಿಯಾದ ಸಮಯಕ್ಕೆ ಬರುತ್ತಾರೆ. ಅಲ್ಲಿ ಅವರಿಗಿಂತ ಮುಂಚೆ ಬಂದವರು ಸ್ವಚ್ಚತೆ ಮಾಡದೇ ಹೋಗಿದ್ದರೆ ತಾನೆ ಪೊರೆಕೆ ಹಿಡಿದು ಗುಡಿಸುತ್ತಾರೆ. ಅಷ್ಟಕ್ಕೂ ಇಲ್ಲಿ ಗುಡಿಸುವವರು ಇಂತವರೇ ಎಂದು ಇಲ್ಲ. ಗ್ರಾಮ ಸೇವಕರಾಗಿದ್ದವರು ಇಲ್ಲಿ ಸೇವೆ ಮಾಡುತ್ತಾರೆ. ಅವರು ಆಗಮಿಸುವಾಗ ತಡವಾದರೆ ಕರ್ತವ್ಯ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಗೋಪಾಲ್ ಅವರು ಸಮಯಕ್ಕೆ ಸರಿಯಾಗಿ ಬಂದು ಕಸಗುಡಿಸುವವರಿಂದ ಆ ಕೆಲಸ ಆಗದಿದ್ದರೆ ಕಛೇರಿಯನ್ನು ಗುಡಿಸಿ ಸ್ವಚ್ಛ ಮಾಡುತ್ತಾರೆ. ಅವರ ಉದ್ದೇಶ ಇಷ್ಟೆ ತಮ್ಮ ಕಚೇರಿ ಸ್ವಚ್ಛವಾಗಿರಬೇಕು ಅನ್ನೋದು.

    ಭಾನುವಾರದ ರಜೆಯ ಗುಂಗಿನಿಂದ ಹೊರಬರದೆ ಸೋಮವಾರ ಕಛೇರಿಗೆ ಸಿಬ್ಬಂದಿಗಳು ತಡವಾಗಿ ಬಂದಿದ್ದರು. ಆದರೆ ಗೋಪಾಲ್ ಮಾತ್ರ ತನ್ನ ಎಂದಿನ ಶೈಲಿಯಂತೆ ಸರಿಯಾದ ಸಮಯಕ್ಕೆ ಬೆಳಗ್ಗೆ ಕಚೇರಿಗೆ ಆಗಮಿಸಿ ತನ್ನ ಬ್ಯಾಗನ್ನು ತನ್ನ ಟೇಬಲ್ ಮೇಲೆ ಇಟ್ಟು ಪೊರಕೆ ಹಿಡಿದು ಸಂಪೂರ್ಣ ಕಚೇರಿಯನ್ನು ಗುಡಿಸಿ ಸ್ವಚ್ಛ ಮಾಡಿದರು. ಕೊನೆಯಲ್ಲಿ ಇವರ ಸ್ವಚ್ಚತಾ ಕಾರ್ಯಕ್ಕೆ ಕಚೇರಿ ಸಿಬ್ಬಂದಿ ಕೈಜೋಡಿಸಿದರು. ನಂತರ ದೇವರಿಗೆ ಕೈಮುಗಿದು ಆ ದಿನದ ತನ್ನ ಕರ್ತವ್ಯ ಆರಂಭಿಸಿದರು.

    ಗೋಪಾಲ್ ಉಪತಹಸೀಲ್ದಾರ್ ಹುದ್ದೆಯಲ್ಲಿದ್ದರೂ ಸಂಸ್ಕಾರವಂತರಾಗಿ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡವರು. ಇವರಲ್ಲಿ ಒಂದು ದ್ವಿಚಕ್ರವಾಹನವೂ ಇಲ್ಲ. ಆಟೋ ಅಥವಾ ಜೀಪ್ ಹತ್ತಿಕೊಂಡೇ ಕಚೇರಿಗೆ ಕರ್ತವ್ಯಕ್ಕೆ ಆಗಮಿಸುತ್ತಾರೆ. ಕಲ್ಲುಗುಡ್ಡೆಯಿಂದ ಬಂದು ಕಡಬ ಪೇಟೆಯಲ್ಲಿ ಇಳಿದು ನಡೆದುಕೊಂಡೇ ಪೇಟೆಯ ದಕ್ಷಿಣದಲ್ಲಿರುವ ತಹಸೀಲ್ದಾರ್ ಕಛೇರಿಗೆ ಬರುತ್ತಾರೆ. ಯಾರಾದರೂ ಪರಿಚಯಸ್ಥರು ಬೈಕ್ ಅಥವಾ ಕಾರಲ್ಲಿ ಕರೆದುಕೊಂಡು ಬಂದರೆ ಬಂದ್ರು ಇಲ್ಲಾಂದರೆ ಗೋಪಾಲ್ ಅವರದ್ದು ಕಛೇರಿ ತನಕ ನಟರಾಜ್ ಸರ್ವಿಸ್. ಇವರ ಕರ್ತವ್ಯದಲ್ಲಿ ಕೂಡಾ ಅಷ್ಟೆ ಕರಾರುವಕ್, ತಮ್ಮ ಟೇಬಲ್ ಬಂದ ಆಯಾ ದಿನದ ಕಡತಗಳನ್ನು ಅಂದೇ ವಿಲೆವಾರಿ ಮಾಡಿಯೇ ಅವರು ತೆರಳುತ್ತರೆ. ಇದೀಗ ಕಛೇರಿ ಕಸ ಗುಡಿಸಿ ಸುದ್ದಿಯಾಗಿದ್ದಾರೆ,

    ಸರಕಾರದ ಕೆಲಸ ದೇವರ ಕೆಲಸ, ಈ ಕಚೇರಿಯೇ ನನಗೆ ನನ್ನ ಕುಟುಂಬಕ್ಕೆ ಅನ್ನ ಹಾಕೋದು, ಇದನ್ನು ಸ್ವಚ್ಛವಾಗಿಡೋದು ನನ್ನ ಕರ್ತವ್ಯ. ಅದರಲ್ಲಿ ನಮಗೆ ಯಾವುದೇ ಮುಜುಗರ ಇಲ್ಲ. ಕಸಗುಡಿಸುದರಿಂದ ನನ್ನ ಘನತೆಗೆ ಏನೂ ಕುಂದುಂಟಾಗುವುದಿಲ್ಲ. ಇನ್ನೊಬ್ಬರಿಗೆ ಮಾದರಿಯಾಗುವ ಕೆಲಸ ಮಾಡಿದಾಗ ದೇವರು ಮೆಚ್ಚುತ್ತಾನೆ ಎನ್ನುತ್ತಾರೆ ಗೋಪಾಲ್.

    Share Information
    Advertisement
    Click to comment

    You must be logged in to post a comment Login

    Leave a Reply