DAKSHINA KANNADA
ಮಾಡದ ತಪ್ಪಿಗೆ ಜೈಲುಶಿಕ್ಷೆ ಅನುಭವಿಸಿ ರಿಯಾದ್ ನಿಂದ ಬಂದ ಮಗ ಚಂದ್ರಶೇಖರ್ ನೋಡಿ ಕಣ್ಣೀರಿಟ್ಟ ತಾಯಿ…!!
ಕಡಬ ಅಕ್ಟೋಬರ್ 21: ಸೌದಿ ಅರೇಬಿಯಾದ ಜೈಲಿನಲ್ಲಿ 11 ತಿಂಗಳ ಕಾಲ ಸೆರೆಮನೆ ವಾಸದ ಬಳಿಕ ಈಗ ಬಂಧಮುಕ್ತವಾಗಿ ಭಾರತಕ್ಕೆ ವಾಪಸಾಗಿರುವ ಕಡಬದ ಚಂದ್ರಶೇಖರ್ ಅವರು ಸುರಕ್ಷಿತವಾಗಿ ಕಡಬ ತಾಲೂಕಿನ ಐತೂರಿನಲ್ಲಿರುವ ತಮ್ಮ ಮನೆ ಸೇರಿದ್ದಾರೆ.
ಸೋಮವಾರ ರಾತ್ರಿ ಚಂದ್ರಶೇಖರ್ ಅವರು ವಿಮಾನದಲ್ಲಿ ಸೌದಿಯ ರಿಯಾದ್ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್ ಸೇರಿದಂತೆ ಹಲವರು ಅವರನ್ನು ಸ್ವಾಗತಿಸಿದರು. ತಾಯಿ ಸಂತೋಷದಿಂದ ಮಗನನ್ನು ಆಲಂಗಿಸಿ ಬರಮಾಡಿಕೊಂಡರು. ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು. ಚಂದ್ರಶೇಖರ್ ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರೂಪಾಯಿ ವರ್ಗಾವಣೆಯಾಗಿತ್ತು. ಇದು ದಾಖಲೆಗಳನ್ನು ನಕಲಿ ಮಾಡಿ ಹಣ ದೋಚುವ ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರಶೇಖರ್ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು. ಚಂದ್ರಶೇಖರ್ ಅವರ ವಾದವನ್ನು ಪರಿಗಣಿಸದೆ ಪೊಲೀಸರು ಅವರನ್ನು ಜೈಲಿಗೆ ಹಾಕಿದ್ದರು.
ಬೆಂಗಳೂರಿನಲ್ಲಿದ್ದ ಚಂದ್ರಶೇಖರ್ ಬಡ್ತಿ ಪಡೆದು ಕೆಲಸಕ್ಕಾಗಿ 2022ರಲ್ಲಿ ಸೌದಿ ಅರೇಬಿಯಾಗೆ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ ಎಂಬ ಕಂಪನಿಯಲ್ಲಿ ಕೆಲಸಕ್ಕಿದ್ದರು. 2022 ನವೆಂಬರ್ನಲ್ಲಿ ಅವರು ಮೊಬೈಲ್ ಹಾಗೂ ಸಿಮ್ ಖರೀದಿಗೆಂದು ರಿಯಾದ್ನ ಅಂಗಡಿಗೆ ತೆರಳಿ, ಸಹಿ, ಬೆರಳಚ್ಚು ಹಾಗೂ ಇತರ ವಿವರಗಳನ್ನು ಎರಡು ಬಾರಿ ನೀಡಿದ್ದರು. ನಂತರ ಮೊಬೈಲ್ಗೆ ಬಂದ ಕರೆಯೊಂದಕ್ಕೆ, ಹೊಸ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ಜೊತೆಗೆ ಒಟಿಪಿಯನ್ನೂ ಹೇಳಿದ್ದರು. ಆ ವೇಳೆ ಚಂದ್ರಶೇಖರ್ ಅವರ ಖಾತೆ ಹ್ಯಾಕ್ ಆಗಿತ್ತು. ಇದಾದ ಒಂದು ವಾರದಲ್ಲಿ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು. ಪೊಲೀಸರು ಬಂಧಿಸಲು ಬಂದಾಗಲೇ ಚಂದ್ರಶೇಖರ್ ಅವರಿಗೆ ಇದು ಅರಿವಿಗೆ ಬಂದಿತ್ತು . ಇದೀಗ ಎಲ್ಲವೂ ಸುಖಾಂತ್ಯ ಕಂಡಿದ್ದು ಚಂದ್ರ ಶೇಖರ್ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾರೆ.