DAKSHINA KANNADA
ಕಡಬ : ಪ್ರಗತಿಪರ ಕೃಷಿಕ ರಮೇಶ ಗೌಡ ಕೊಲೆ ಆರೋಪಿ ಹರೀಶ್ ಬಂಧನ
ಕಡಬ : ದಾರಿಯ ತಕರಾರಿಗೆ ಸಂಬಂಧಿಸಿ ಕಡಬ ತಾಲೂಕಿನ ಗೋಳಿತೊಟ್ಟುವಿನ ಆಲಂತಾಯ ಗ್ರಾಮದ ಪೆರ್ಲ ನಿವಾಸಿ ಪ್ರಗತಿಪರ ಕೃಷಿಕ ರಮೇಶ ಗೌಡ ಎಂಬವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪೆರ್ಲ ಕಲ್ಲಂಡದ ಹರೀಶ (29) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಪೆರ್ಲ ಪರಿಸರದಲ್ಲಿ ಉಪ್ಪಿನಂಗಡಿ ಪೊಲೀಸರು ಹರೀಶನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನ.8ರ ರಾತ್ರಿ ರಮೇಶ ಗೌಡ ಎಂಬವರನ್ನು ದಾರಿಯಲ್ಲಿ ಕಾದು ಕುಳಿತು ರಮೇಶ್ ಗೌಡನನ್ನು ಅಟ್ಟಾಡಿಸಿ, ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಶ್ರೀಧರ ಗೌಡರ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಈ ಕೊಲೆ ಪ್ರಕರಣದಲ್ಲಿ ಆರೋಪಿ ಹರೀಶ ಎಂಬಾತನ ತಂಗಿಯ ಗಂಡ ಸಂತೋಷ್ ಹಾಗೂ ಧರ್ಣಪ್ಪ ಯಾನೆ ಬೆಳಿಯಪ್ಪ ಗೌಡ ಎಂಬವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಲೆ ಆರೋಪಿ ಹರೀಶನ ಮನೆಯವರಿಗೂ ನನ್ನ ಗಂಡನಿಗೂ ಸುಮಾರು 7-8 ತಿಂಗಳ ಹಿಂದೆ ರಸ್ತೆಗೆ ನೀರಿನ ಪೈಪ್ ಅಳವಡಿಸಿದ ಬಗ್ಗೆ ಬಾಯಿ ಮಾತಿನಲ್ಲಿ ಮನಸ್ತಾಪವಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆ ಬಳಿಕ ಮರವೊಂದನ್ನು ಕಡಿಯುವ ವಿಚಾರದಲ್ಲಿ ಮನಸ್ತಾಪ ಮುಂದುವರಿದಿತ್ತು. ನ.8ರಂದು ರಾತ್ರಿ ನನ್ನ ಗಂಡ ದೇವಸ್ಥಾನಕ್ಕೆಂದು ಬೈಕ್‍ನಲ್ಲಿ ಹೊರಟಿದ್ದು, ಮನೆಯಿಂದ ಸ್ವಲ್ಪ ದೂರದಲ್ಲೇ ನನ್ನ ಗಂಡ ಬೊಬ್ಬೆ ಹಾಕುತ್ತಿರುವ ಶಬ್ದ ಕೇಳಿ ನಾವು ಅಲ್ಲಿಗೆ ಓಡಿ ಹೋಗಿ ನೋಡಿದಾಗ ಆರೋಪಿಗಳಾದ ಹರೀಶ್, ಆತನ ತಂಗಿಯ ಗಂಡ ಸಂತೋಷ್ ಹಾಗೂ ಧರ್ಣಪ್ಪ ಯಾನೆ ಬೆಳಿಯಪ್ಪ ಎಂಬವರು ಸೇರಿ ಕತ್ತಿಯಿಂದ ನನ್ನ ಗಂಡನಿಗೆ ಕಡಿದಿದ್ದಾರೆ. ಇದರ ಪರಿಣಾಮ ಗಂಭೀರ ಗಾಯಗೊಂಡ ಅವರು ಮೃತಪಟ್ಟಿರುತ್ತಾರೆ ಎಂದು ಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರ ತನಿಖೆ ಮುಂದುವರೆದಿದೆ.