Connect with us

LATEST NEWS

ರಾಷ್ಟ್ರೀಯ ಕಬ್ಬಡಿ ತಂಡಕ್ಕೆ ಆಯ್ಕೆಯಾದ ಏಕೈಕ ಕನ್ನಡಿಗನಿಗೆ ತರಭೇತಿಗೆ ಅವಕಾಶ ನೀಡದ ಕಬಡ್ಡಿ ಅಸೋಶಿಯೇಶನ್ …!!

ಪುತ್ತೂರು : ಭಾರತ ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಲು ಇರುವ ಎಲ್ಲಾ ಅರ್ಹತೆಯನ್ನು ಹೊಂದಿರುವ ಗ್ರಾಮೀಣ ಪ್ರತಿಭೆಯೊಂದು ಇದೀಗ ನೇಪತ್ಯಕ್ಕೆ ಸರಿಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ರಾಷ್ಟ್ರೀಯ ತಂಡಕ್ಕೆ ತರಭೇತಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಕಬಡ್ಡಿ ಆಟಗಾರನಿಗೆ ಕರ್ನಾಟಕದ ಕಬಡ್ಡಿ ಅಸೋಶಿಯೇಶನ್ ಗಳೇ ಅನ್ಯಾಯ ಮಾಡುತ್ತಿದೆಯೋ ಎನ್ನುವ ಸಂಶಯವೂ ಮೂಡಲಾರಂಭಿಸಿದೆ. ಕಬಡ್ಡಿ ಅಸೋಶಿಯೇಶನ್ ಗಳ ಸಮಸ್ಯೆಯಿಂದಾಗಿ ತರಭೇತಿ ಪಡೆಯುವ ತಂಡದ ಪಟ್ಟಿಯಿಂದ ಹೊರಗುಳಿಯಬೇಕಾದ ಅಸಹಾಯಕ ಸ್ಥಿತಿಯಲ್ಲಿ ಇಲ್ಲೊಬ್ಬ ಪ್ರತಿಭಾವಂತ ಕ್ರೀಡಾಪಟುವಿದ್ದಾನೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಚಿನ್ ಪ್ರತಾಪ್ ಮೊದಲ ಹಂತದ ಆನ್‌ಲೈನ್ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದಿರುವ ಕ್ರೀಡಾಪಟು. ನಿಮ್ಮ ಆಯ್ಕೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎನ್ನುವ ಉತ್ತರ ದಿಲ್ಲಿ ರಾಷ್ಟ್ರೀಯ ಅಮೆಚೂರ್ ಅಸೋಸಿಯೇಶನ್‌ನಿಂದ ಬಂದಿದ್ದು ಹಳ್ಳಿಗಾಡಿನ ಪ್ರತಿಭೆಗೆ ಅವಕಾಶ ಕೈ ತಪ್ಪುವ ಆತಂಕ ಕಾಡಿದೆ. ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಸಚಿನ್ ಪ್ರತಾಪ್ ಅವರು ಆರು ತಿಂಗಳ ಹಿಂದೆ ಭಾರತದ ಕಬಡ್ಡಿ ತಂಡದ 28 ಸದಸ್ಯರ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಗೊಂಡ 28 ಸ್ಪರ್ಧಿಗಳ ಕರ್ನಾಟಕದಿಂದ ಆಯ್ಕೆಗೊಂಡ ಏಕೈಕ ಆಟಗಾರ ಎಂಬುದು ಅವರ ಹೆಗ್ಗಳಿಕೆ ಆಗಿತ್ತು.


ಕೊರೊನಾ ಕಾರಣದಿಂದ ಮುಂದೂಡಿದ ಶಿಬಿರದ ಪ್ರಥಮ ಅವಧಿ ಆನ್ ಲೈನ್ ಕ್ಲಾಸ್ ತರಗತಿಗಳು ಕೆಲವು ದಿನಗಳ ಹಿಂದೆ ಮುಗಿದಿದೆ. ತರಬೇತಿಗೆ ಪಾಲ್ಗೊಳ್ಳಲು ದಿಲ್ಲಿಯಲ್ಲಿರುವ ಕಬಡ್ಡಿ ಅಸೋಸಿಯೇಷನ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪ್ರತಾಪ್ ಅವರ ಹೆಸರು ಕೈಬಿಡಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಆಯ್ಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂಬ ಉತ್ತರ ಬಂದಿದೆ.


ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದಿಂದ ಸೀನಿಯರ್ ವಿಭಾಗದಲ್ಲಿ ಪ್ರತಾಪ್ ಹಾಗೂ ಜೂನಿಯರ್ ವಿಭಾಗದಲ್ಲಿ ದ.ಕ. ಜಿಲ್ಲೆಯ ವಿನೋದ್ ಅವರು ಆಯ್ಕೆ ಆಗಿದ್ದರು. ಪ್ರತಾಪ್ ಮಾತ್ರವಲ್ಲದೆ ವಿನೋದ್ ಈ ಇಬ್ಬರಿಗೂ ತರಬೇತಿ ಶಿಬಿರಕ್ಕೆ ಆಹ್ವಾನ ನೀಡಲಾಗಿಲ್ಲ. ಕರ್ನಾಟಕ ಕಬಡ್ಡಿ ಅಸೋಶಿಯೇಶನ್ ಮಧ್ಯೆ ಕೆಲವು ಸಮಸ್ಯೆಗಳು ಇರುವ ಹಿನ್ನಲೆಯಲ್ಲಿ ಈ ಪ್ರತಿಭೆ ಇದೀಗ ಅವಕಾಶ ವಂಚಿತವಾಗುತ್ತಿದೆ.

ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಳ್ಳುವ ತರಭೇತಿಗೆ ತನಗೆ ಅವಕಾಶ ಕಲ್ಪಿಸಿಕೊಡುವಂತೆ ಸಚಿನ್ ಪ್ರತಾಪ್ ಇದೀಗ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡರಿಗೂ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಾಪ್ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಈ ಕುರಿತು ಕ್ರೀಡಾ ಇಲಾಖೆಯ ಅಧಿಕಾರಿಗಳಲ್ಲಿ ಸಮಾಲೋಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆ.  ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಪ್ರತಾಪ್ ಭವಿಷ್ಯ ಇದೀಗ ತೂಗುಯ್ಯೂಲೆಯಲ್ಲಿದೆ. ಕರ್ನಾಟಕ ಸರಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ಪ್ರತಾಪ್ ಭವಿಷ್ಯಕ್ಕೆ ಆಸರೆಯಾಗಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *