DAKSHINA KANNADA
ಕಾವ್ಯಾ ಸಾವಿನ ವರದಿ ಬಹಿರಂಗಗೊಳಿಸದಿದ್ದಲ್ಲಿ ಸೆ. 23 ರಂದು ಅರೆ ಬೆತ್ತಲೆ ಪ್ರತಿಭಟನೆ

ಮಂಗಳೂರು,ಸೆಪ್ಟೆಂಬರ್ 12 : ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವಿನ ನಿಗೂಢತೆಯ ಕುರಿತು ಪೊಲೀಸರು ನಡೆಸಿದ ತನಿಖೆಯ ಸಂಪೂರ್ಣ ವರದಿಯ ಸತ್ಯಾಂಶವನ್ನು ಸಪ್ಟೆಂಬರ್ 20 ರ ಒಳಗೆ ಬಹಿರಂಗಗೊಳಿಸದಿದ್ದಲ್ಲಿ ಸಪ್ಟೆಂಬರ್ 23 ರಂದು ಅರೆಬೆತ್ತಲೆ ಮೆರವಣೆಗೆ ನಡೆಸುವುದಾಗಿ ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿ ಎಚ್ಚರಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿಯ ಸಂಚಾಲಕ ದಿನಕರ್ ಶೆಟ್ಟಿ ಕಾವ್ಯಾ ಅವರ ಸಾವು ಸಂಭವಿಸಿ ಇಂದಿಗೆ 53 ದಿನಗಳು ಸಂದಿವೆ. ಈ ವರೆಗೆ ಸಾವಿನ ಸತ್ಯಾಂಶ ಸ್ಪಷ್ಟಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಣಂಬೂರು ಉಪವಿಭಾಗದ ಎಸಿಪಿ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾಗಿದ್ದ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ಆದರೆ ಪೊಲೀಸ್ ಇಲಾಖೆ ತನಿಖೆಯ ವರದಿಯನ್ನು ಬಹಿರಂಗಗೊಳಿಸಿಲ್ಲ ಎಂದು ಕಿಡಿಕಾರಿದರು.
ಕಾವ್ಯ ಸಾವಿನ ನ್ಯಾಯಕ್ಕಾಗಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಅನೇಕ ಸರಣಿ ಹೋರಾಟಗಳು ನಡೆದಿವೆ. ಆದರೆ ಬಡ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನಿರ್ಲಕ್ಷ ತೋರಿದೆ ಎಂದು ಆರೋಪಿಸಿದರು.
ಕಾವ್ಯಾ ಳ ಸಾವಿನ ನ್ಯಾಯಕ್ಕಾಗಿ ಸಪ್ಟಂಬರ್ 16 ರಂದು ಹೋರಾಟ ಸಮಿತಿ ಜಿಲ್ಲಾ ಬಂದ್ ಗೆ ಕರೆನೀಡಲು ನಿರ್ಧರಿಸಿತ್ತು. ಆದರೆ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ಅಶಾಂತಿಯ ವಾತಾವರಣವಿದ್ದು ಬಂದ್ ಕರೆ ನೀಡುವುದು ಬೇಡ ಎಂದು ಪೊಲೀಸ್ ಇಲಾಖೆ ವಿನಂತಿಸಿತ್ತು. ಈ ಹಿನ್ನೆಲೆಯಲ್ಲಿ ಬಂದ್ ಕರೆ ನೀಡುವ ನಿರ್ಧಾರ ಹಿಂಪಡೆಯಲಾಗಿತ್ತು ಎಂದು ಅವರು ತಿಳಿಸಿದರು.
ಆದರೆ ಪೊಲೀಸ್ ಇಲಾಖೆ ಕಾವ್ಯ ಸಾವಿನ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತವಾಗಿ ಯತ್ನಿಸುತ್ತಿದೆ ಎಂಬ ಸಂಶಯ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಸಪ್ಡೆಂಬರ್ 20ರ ಒಳಗಾಗಿ ಪೊಲೀಸ್ ಇಲಾಖೆ ತನಿಖೆಯ ಪೂರ್ಣ ವರದಿಯನ್ನು ಬಹಿರಂಗ ಗೊಳಿಸದೆ ಹೋದರೆ ಸೆಪ್ಟೆಂಬರ್ 23 ರಂದು ಮಂಗಳೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದೆಂದು ಅವರು ಎಚ್ಚರಿಸಿದರು. ವಿವಿಧ ಸಮಾನ ಮನಸ್ಕ ಸಂಘಟನೆಯ ಮುಖಂಡರುಗಳು, ಪದಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
