LATEST NEWS
ಗ್ಯಾಂಗ್ ಸ್ಟರ್ ಗೆ ಜಾಮೀನು ನಿರಾಕರಿಸಿದ್ದಕ್ಕೆ ನ್ಯಾಯಾಧೀಶರನ್ನೆ ಅಪಘಾತ ಮಾಡಿಸಿ ಕೊಲೆ….!!
ನವದೆಹಲಿ: ಸಿನಿಮೀಯ ರೀತಿಯಲ್ಲಿ ನ್ಯಾಯಾಧೀಶರೊಬ್ಬರನ್ನು ಅಪಘಾತ ನಡೆಸಿ ಕೊಲೆ ಮಾಡಿರುವ ಘಟನೆ ಧನ್ ಬಾದ್ ನಲ್ಲಿ ನಡೆದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಾರ್ಖಂಡ್ ಹೈಕೋರ್ಟ್ ತನಿಖೆಯ ಪರಿಶೀಲನೆ ನಡೆಸುತ್ತಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಧನಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಬುಧವಾರ ಬೆಳಿಗ್ಗೆ 5 ಗಂಟೆಗೆ ಜಿಲ್ಲಾ ನ್ಯಾಯಾಲಯದ ಬಳಿ ವಾಯುವಿಹಾರಕ್ಕೆ ತೆರಳಿದ್ದಾಗ ಹಿಂದಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿತ್ತು. ಆಟೊ ರಿಕ್ಷಾ ಚಾಲಕರೊಬ್ಬರು ಗಂಭೀರ ಪರಿಸ್ಥಿತಿಯಲ್ಲಿದ್ದ ನ್ಯಾಯಾಧೀಶರನ್ನು ತಕ್ಷಣವೇ ಸಮೀಪದ ಶಹೀದ್ ನಿರ್ಮಲ್ ಮಹ್ತೊ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅವರು, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾದರು.
ಈ ಕುರಿತಂತೆ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ನ್ಯಾಯಾಧೀಶರ ಹತ್ಯೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠದ ಗಮನಕ್ಕೆ ತಂದರು. ಗ್ಯಾಂಗ್‌ಸ್ಟರ್‌ಗೆ ಜಾಮೀನು ನೀಡದ ಕಾರಣ ಹತ್ಯೆ ಮಾಡಿದರೆ ಈ ದೇಶದಲ್ಲಿ ನ್ಯಾಯಾಂಗವೇ ಇಲ್ಲದಂತಾಗುತ್ತದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು, ‘ಘಟನೆಯ ಬಗ್ಗೆ ನಮಗೆ ಮಾಹಿತಿ ಇದೆ. ವಕೀಲರ ಸಂಘದ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜತೆ ನಾನು ಮಾತನಾಡಿದ್ದೇನೆ. ಈ ಪ್ರಕರಣದ ವಿಚಾರಣೆ ಅಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.