Connect with us

LATEST NEWS

ಮಂಗಳೂರು ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಕೊಲೆ ಪ್ರಕರಣ – ಕಪ್ಪು ಬ್ಯಾಗ್ ಕಪ್ಪು ಶರ್ಟ್ ನಿಂದಾಗಿ ಸಿಕ್ಕಿ ಬಿದ್ದ ಕೊಲೆಗಾರ

Share Information

ಮಂಗಳೂರು ಮಾರ್ಚ್ 04: ಮಂಗಳೂರು ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಯಿಂದ ಆಘಾತಕಾರಿ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದು, ಆರೋಪಿ ಮಂಗಳೂರು ಮಾತ್ರವಲ್ಲದೆ ತಮಿಳುನಾಡು, ಕೇರಳ, ಗೋವಾದಲ್ಲಿಯೂ ಇದೇ ರೀತಿಯ ಕೃತ್ಯ ನಡೆಸುವ ಉದ್ದೇಶದಿಂದ ಓಡಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.


ಮಂಗಳೂರಿನಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಕೊಲೆ ಪ್ರಕರಣದ ಆರೋಪಿ ಶಿಫಾಸ್ ಬಂಧನ ಸವಾಲಾಗಿ ಪರಿಣಮಿಸಿತ್ತು, ಆತನ ಮುಖಚರ್ಯೆ ಸ್ಪಷ್ಟವಾಗಿ ಯಾವುದೇ ಸಿಸಿ ಕೆಮರಾದಲ್ಲಿ ದಾಖಲಾಗಿರಲಿಲ್ಲ. ಹಾಗಾಗಿ ಆತನ ಚಹರೆ, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಚಿತ್ರಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಇದನ್ನು ಗಮನಿಸಿದ ಕಾಸರಗೋಡಿನ ಪೊಲೀಸರು ಓರ್ವ ಶಂಕಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ಮಾಹಿತಿ ನೀಡಿದ್ದರು. ಆತ ಧರಿಸಿದ್ದ ಬ್ಯಾಗ್‌ನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದರು. ಬಳಿಕ ಮಂಗಳೂರು ಪೊಲೀಸರು ವಿಚಾರಿಸಿದಾಗ ಆತನೇ ಆರೋಪಿ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.


ಆರೋಪಿ ದರೋಡೆ ಹಿನ್ನಲೆ ಮಂಗಳೂರು ಜ್ಯುವೆಲ್ಲರಿಗೆ ನುಗ್ಗಿದ್ದು ಅಂಗಡಿಯ ಸೇಲ್ಸ್‌ಮ್ಯಾನ್ ರಾಘವೇಂದ್ರ ಆಚಾರ್ಯ ಅವರು ಜುವೆಲರಿ ಅಂಗಡಿಯಲ್ಲಿ ಒಳಗಿನ ಕೋಣೆಗೆ ಹೋದಾಗ ಆರೋಪಿ ಶಿಫಾಸ್ ಅವರನ್ನು ಹಿಂಬಾಲಿಸಿ ಅವರೊಂದಿಗೆ ಸಂಘರ್ಷ ನಡೆಸಿ ಚೂರಿಯಲ್ಲಿ ಇರಿದಿದ್ದ. ಕೃತ್ಯ ನಡೆಸಿ ಸ್ವಲ್ಪ ದೂರದವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಆಟೋದಲ್ಲಿ ಹೆದ್ದಾರಿ ಕಡೆಗೆ ತೆರಳಿದ್ದ. ಆರೋಪಿ ಭಾರೀ ದರೋಡೆ ಮಾಡುವ ಇರಾದೆ ಹೊಂದಿದ್ದ. ಆತ ಚೂರಿಯಿಂದ ಇರಿದ ಕೂಡಲೇ ಅಂಗಡಿ ಮಾಲೀಕರು ಅಂಗಡಿಗೆ ಬಂದಿದ್ದರು. ಆಗ ಪರಾರಿಯಾಗಿದ್ದ. ಅಂಗಡಿಯಿಂದ ಕೆಲವು ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯಲ್ಲಿ ವಿಚಾರಿಸುವಾಗ ಸಮರ್ಪಕ ಉತ್ತರ ನೀಡಿಲ್ಲ. ಈ ಬಗ್ಗೆ ವಿಚಾರಣೆ, ಪರಿಶೀಲನೆ ಮುಂದುವರೆಸಲಾಗುವುದು ಎಂದು ತಿಳಿಸಿದರು.


Share Information
Advertisement
Click to comment

You must be logged in to post a comment Login

Leave a Reply