LATEST NEWS
ಮಳೆಯಲ್ಲಿ ಜೆಸಿಬಿಯಲ್ಲಿ ನೀರು ಖಾಲಿ ಮಾಡುವ ಹೊಸ ತಂತ್ರಜ್ಞಾನ ಜಗತ್ತಿಗೆ ಪರಿಚಯಿಸಿದ ಸ್ಮಾರ್ಟಿ ಸಿಟಿ ಮಂಗಳೂರು…!!
ಮಂಗಳೂರು ಜುಲೈ 13:ಮಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವಂತೆ ಮಾಡಿದೆ. ಇಡೀ ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ನೆಪದಲ್ಲಿ ಬಹುತೇಕ ಚರಂಡಿಗಳು ಕಾಮಗಾರಿ ಹಂತದಲ್ಲಿದ್ದು, ನೀರು ಸದ್ಯ ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಈ ನಡುವೆ ಹೊಂಡಗಳಲ್ಲಿ ತುಂಬಿರುವ ನೀರನ್ನು ಜೆಸಿಬಿ ಬಳಸಿ ತೆಗೆಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಮಾರ್ಟ್ ಸಿಟಿ ಮಂಗಳೂರಿನ ಅವಸ್ಥೆಗೆ ಕೈಗನ್ನಡಿ ಹಿಡಿದಿದೆ.
ಇಂದು ಸುರಿದ ಮಳೆಗೆ ಹಂಪನಕಟ್ಟೆಯ ಒಂದು ವಾಣಿಜ್ಯ ಕಟ್ಟಡದ ನೆಲ ಅಂತಸ್ತಿಗೆ ನೀರು ನುಗ್ಗಿದೆ. ಇದನ್ನು ಪಂಪ್ ಮೂಲಕ ಒಳ ತುಂಬಿದ್ದ ನೀರನ್ನು ಹೊರಹಾಕಲಾಗಿದೆ. ನಗರದ ಬಹುತೇಕ ರಸ್ತೆಗಳನ್ನು ಸ್ಮಾರ್ಟಿ ಸಿಟಿ ಕಾಮಗಾರಿ ಹೆಸರಲ್ಲಿ ಅಗೆದು ಹಾಕಲಾಗಿದ್ದು, ಮಳೆ ನೀರು ಹರಿಯಲು ಸರಿಯಾದ ಕಾಲುವೆ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆ ಕಾಮಗಾರಿ ಕಾಂಕ್ರೀಟ್ ನ ಎರಡೂ ಭಾಗಗಳಲ್ಲಿ ಹೊಂಡಗಳು ತುಂಬಿದ್ದು, ಇದರಲ್ಲಿ ನೀರು ತುಂಬಿಕೊಂಡು ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದೆ.
ಇನ್ನು ವೈರಲ್ ಆಗಿರುವ ವಿಡಿಯೋ ಕಂಡು ಬಂದಿದ್ದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿ. ಮಣ್ಣು ಅಗೆಯುವ ಜೆಸಿಬಿಯಿಂದ ನೀರು ತೆಗೆಯುವ ಹೊಸ ತಂತ್ರಜ್ಞಾನ ಮಂಗಳೂರಿನಲ್ಲಿ ಪರಿಚಯಿಸಲಾಗಿದ್ದು, ಸುರಿಯುತ್ತಿರುವ ಮಳೆಯ ನಡುವೆಯೂ ಜೆಸಿಬಿ ಚಾಲಕನ ನೀರು ತೆಗೆಯುವ ಪರಿಯ ವಿಡಿಯೋ ಈಗ ಸಖತ್ ವೈರಲ್ ಆಗಿದೆ.