LATEST NEWS
ಹಿಂದಿ ಭಾಷೆ ವಿವಾದ – ಜಯಪ್ರಕಾಶ್ ಹೆಗ್ಡೆ ವಿರುದ್ದ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಉಡುಪಿ ಮಾರ್ಚ್ 24: ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಇದೀಗ ಹಿಂದಿ ಭಾಷೆ ವಿವಾದ ಸುದ್ದಿಯಲ್ಲಿದ್ದು, ಕಾಂಗ್ರೇಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಕೋಟ ಅವರ ಕುರಿತಂತೆ ಹೇಳಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೆ, ಹಿಂದಿ ಇಂಗ್ಲಿಷ್ ಬರಲ್ಲ, ಅವರಿಗೆ ಮತ ಹಾಕಬೇಡಿ ಎಂಬ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿಕೆ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಾ.22ರಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬ್ರಹ್ಮಾವರದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ “ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕನ್ನಡ ಬಿಟ್ಟರೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ” ಎಂದಿದ್ದರು. ಈ ಬಗ್ಗೆ “ಕೋಟಗೆ ಹಿಂದಿ, ಇಂಗ್ಲಿಷ್ ಬರಲ್ಲ, ಗೆಲ್ಲಿಸಬೇಡಿ” ಎಂಬ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಸದರಿ ಹೇಳಿಕೆಯು ಭಾಷಾ ಸಾಮರಸ್ಯವನ್ನು ಹದಗೆಡಿಸುವ ಹಾಗೂ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವುದಲ್ಲದೆ ಪ್ರಾದೇಶಿಕ ಭಾಷೆಯ ಬಗ್ಗೆ ಅವಮಾನಕರ ಹೇಳಿಕೆಯಾಗಿರುತ್ತದೆ. ಆದ್ದರಿಂದ ಭಾಷೆಯ ಹೆಸರಿನಲ್ಲಿ ಮತ ಯಾಚಿಸಿ ಪ್ರತಿಸ್ಪರ್ಧಿಯನ್ನು ಗೆಲ್ಲಿಸಬೇಡಿ ಎಂದು ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಜಯಪ್ರಕಾಶ್ ಹೆಗ್ಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಹೇಳಿದೆ.
ಆದರೆ ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಜೆಪಿ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ. ನಾನು ಆ ರೀತಿಯ ಹೇಳಿಕೆ ನೀಡಿಲ್ಲ, ನನ್ನ ಮಾತುಗಳನ್ನು ತಿರುಚಲಾಗಿದೆ ಎಂದು ಹೇಳಿದ್ದರು. ಆದರೂ ಬಿಜೆಪಿ ಮಾತ್ರ ಇದೀಗ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಭಾಷೆ ವಿವಾದವನ್ನು ಪ್ರಚಾರಕ್ಕೆ ಬಳಸುತ್ತಿದೆ.