Connect with us

    UDUPI

    ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ : ಕೆ. ಜಯಪ್ರಕಾಶ್ ಹೆಗ್ಡೆ

    ಉಡುಪಿ, ಸೆಪ್ಟಂಬರ್ 05: ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಇದಕ್ಕೆ ಅಂತ್ಯ ಹಾಗೂ ವಯಸ್ಸಿನ ಮಿತಿ ಇಲ್ಲ. ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.


    ಅವರು ಇಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ ಹಾಗೂ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಇವರ ಸಹಯೋಗದಲ್ಲಿ ಡಾ. ಎಸ್ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಸ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

    ಮಕ್ಕಳನ್ನು ತಿದ್ದಿ, ಅವರುಗಳಿಗೆ ಉತ್ತಮ ವಿಚಾರಗಳನ್ನು ಬೋಧಿಸಿ, ಅವರುಗಳನ್ನು ಸಮಾಜದಲ್ಲಿ ಶಿಕ್ಷಣವಂತರಾಗಿ ನಿಲ್ಲುವಂತೆ ಮಾಡುವವರು ಶಿಕ್ಷಕರು. ರಾಷ್ಟçಕವಿ ಕುವೆಂಪು ರವರ ವ್ಯಾಖ್ಯಾನದಂತೆ ಸಮಾಜವು ಶಾಂತಿಯ ತೋಟವಾಗಲು ಪ್ರಾರಂಭವಾಗುವುದು ಪ್ರಾಥಮಿಕ ಶಿಕ್ಷಣದಿಂದ. ರಾಜ್ಯದ ಅಭಿವೃದ್ಧಿಗೆ ಮೊದಲು ಆರೋಗ್ಯ ಮತ್ತು ಶಿಕ್ಷಣವೇ ಮೂಲ. ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ. ಶಾಲೆಯಲ್ಲಿ ಶಿಕ್ಷಕರ ನಡುವೆ ಸೌಹಾರ್ದ ವಾತಾವರಣ ನಿರ್ಮಾಣವಾದಾಗ ಮಾತ್ರ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು ಎಂದರು.


    ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಶಕ್ತರಾದಾಗ ಮಾತ್ರ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಣದ ಗುಣಮಟ್ಟವನ್ನು ಉಳಿಸಿಕೊಳ್ಳುವುದರ ಜೊತೆಗೆ ಶಿಕ್ಷಣದಲ್ಲಿ ಮುಂದೆ ಬರುವಂತೆ ಮಕ್ಕಳಿಗೆ ಪೋತ್ಸಾಹ ನೀಡಬೇಕು. ವಿದ್ಯಾರ್ಥಿಗಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಶಿಕ್ಷಕರು ಮೂಡಿಸಬೇಕು ಎಂದರು.
    ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಗುರು ಎಂದರೆ ಜ್ಞಾನ ನೀಡುವವರು. ಸಮಾಜದಲ್ಲಿ ಮುಖ್ಯವಾಗಿ ಗುರುಗಳು ಹಾಗೂ ವೈದ್ಯರನ್ನು ಪ್ರತಿಯೊಬ್ಬರೂ ಗೌರವಿಸುತ್ತಾರೆ. ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವಂತವರು ಶಿಕ್ಷಕರಾದರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ವೈದ್ಯರು. ಮಕ್ಕಳನ್ನು ತಿದ್ದಿ, ಅವರನ್ನು ಸರಿ ದಾರಿಗೆ ತಂದು ಸಮಾಜದಲ್ಲಿ ಪರಿಪಕ್ವ ವ್ಯಕ್ತಿಗಳನ್ನಾಗಿ ಮಾಡುವವರು ಶಿಕ್ಷಕರು. ಆ ಸ್ಥಾನಕ್ಕೆ ಇರುವ ಗೌರವವನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು ಎಂದರು. ಮಕ್ಕಳ ಮೊದಲ ರೋಲ್ ಮಾಡೆಲ್ ಶಿಕ್ಷಕರಾಗಿದ್ದು, ಅವರು ಆ ಸ್ಥಾನವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತರುವಲ್ಲಿ ಎಲ್ಲರೂ ತಂಡವಾಗಿ ಕರ್ತವ್ಯ ನಿರ್ವಹಿಸಬೇಕು. ಶಿಕ್ಷಕರು ವೃತ್ತಿ ಜೀವನದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯವನ್ನು ಮೀಸಲಿಡುವಂತೆ ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply