KARNATAKA
ಜಪಾನ್ ಮಹಿಳೆ ಕೋಪ – ಗೋಕರ್ಣ ಪೊಲೀಸರಿಗೆ ಪಜೀತಿ!
ಕಾರವಾರ, ಫೆಬ್ರವರಿ 10: ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದಲ್ಲಿ ಪತ್ತೆಯಾಗಿದ್ದು, ಗೋಕರ್ಣ ಪೊಲೀಸರ ತಂಡ ಆಕೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಫೆ.5 ರಂದು ಗೋಕರ್ಣ ನೇಚರ್ ಕಾಟೇಜ್‌ನಿಂದ ನಾಪತ್ತೆಯಾಗಿದ್ದು, ಆಕೆಯ ಪತಿ ದೈ ಯಮಾಝಕಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗೋಕರ್ಣ ಪೊಲೀಸರು ಪಿಎಸ್ಐ ಖಾದರ್ ಭಾಷಾ ಮತ್ತು ಸುಧಾ ಅಘನಾಶಿನಿ ನೇತೃತ್ವದ ವಿಶೇಷ ತಂಡ ರಚಿಸಿದ್ದರು.
ಕಾಣೆಯಾಗಿದ್ದ ಎಮಿ ಯಮಾಝಕಿ ಆನ್‌ಲೈನ್‌ನಲ್ಲಿ ಇರುವ ಕುರಿತು ಪತ್ತೆ ನಡೆಸಿದ ಪೊಲೀಸರು ಕೇರಳದ ಸ್ಥಳ ಟ್ರ್ಯಾಕ್ ಮಾಡಿದ್ದರು. ನಂತರ ಅಲ್ಲಿಗೆ ತೆರಳಿದ್ದಾಗ ಆಕೆ ಪತ್ತೆಯಾಗಿದ್ದು, ಇದೀಗ ಗೋಕರ್ಣಕ್ಕೆ ಕರೆತರುತ್ತಿದ್ದಾರೆ.
ಫೆ.4 ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್‌ನಲ್ಲಿ ತನ್ನ ಪತಿಯ ಜತೆ ತಂಗಿದ್ದ ಮಹಿಳೆ ಯಾವುದೋ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದಳು. ನಂತರ ಪತಿಯ ಮೇಲಿನ ಸಿಟ್ಟಿನಿಂದ ಮುಂಜಾನೆ ಎದ್ದು ಹೋದ ಮಹಿಳೆ ಗೋಕರ್ಣದ ರೈಲ್ವೆ ನಿಲ್ದಾಣಕ್ಕೆ ತೆರಳಿ ಹಿಂದೆ ಭೇಟಿ ನೀಡಿದ್ದ ಕೇರಳಕ್ಕೆ ತೆರಳಿದ್ದಾಳೆ. ಈ ವೇಳೆ ಆನ್‌ಲೈನ್‌ನಲ್ಲಿ ಸಕ್ರಿಯವಾಗಿದ್ದರಿಂದ ಪತ್ತೆಹಚ್ಚುವಲ್ಲಿ ಪೊಲೀಸರಿಗೂ ಸಹಾಯವಾಗಿದ್ದು, ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.