LATEST NEWS
ಜಲೀಲ್ ಹತ್ಯೆ ಪ್ರಕರಣ – ನಾಲ್ಕು ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ…!!

ಮಂಗಳೂರು, ಡಿಸೆಂಬರ್ 25: ನಿನ್ನೆ ಸುರತ್ಕಲ್ ನಲ್ಲಿ ನಡೆದ ಅಂಗಡಿ ಮಾಲೀಕನ ಹತ್ಯೆ ಪ್ರಕರಣದ ಬಳಿಕ ಮುಂಜಾಗೃತಾ ಕ್ರಮವಾಗಿ ಸುರತ್ಕಲ್, ಕಾವೂರು, ಪಣಂಬೂರು, ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಮಾಡಿದ್ದಾರೆ.
ಸೆಕ್ಷನ್ ಹಿನ್ನಲೆ ಜನ ಗುಂಪು ಕೂಡುವುದು, ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ ಕ್ರಿಸ್ಮಸ್ ಇರುವುದರಿಂದ ಧಾರ್ಮಿಕ ಕಾರ್ಯಕ್ರಮಕ್ಕೆ ಸೆಕ್ಷನ್ ಅಡಿ ರಿಯಾಯಿತಿ ನೀಡಲಾಗಿದೆ. ಚರ್ಚ್ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಇರುವುದಿಲ್ಲ. ಡಿ.25ರ ಬೆಳಗ್ಗೆ 6ರಿಂದ 27ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಇರಲಿದೆ.

ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವ ಸಲುವಾಗಿ ಎರಡು ದಿನಗಳ ಕಾಲ ಸೆಕ್ಷನ್ ಹೇರಲಾಗಿರುವ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನೂ ಬಂದ್ ಮಾಡಲಾಗಿದೆ. ರಾತ್ರಿ ವೇಳೆ ಜನಸಂಚಾರ ನಿರ್ಬಂಧಿಸುವ ಉದ್ದೇಶದಿಂದ ಕೈಗಾರಿಕೆ, ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ಪಾಳಿಯನ್ನು ಕಡಿತಕ್ಕೆ ಸೂಚನೆ ನೀಡಲಾಗಿದೆ. ಸುರತ್ಕಲ್, ಪಣಂಬೂರು, ಕಾವೂರು, ಬಜ್ಪೆ ವ್ಯಾಪ್ತಿಯ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ವೇಳೆ ಕರ್ತವ್ಯ ನಡೆಸದೆ, ಸಂಜೆ ಆರು ಗಂಟೆ ವೇಳೆಗೆ ಕರ್ತವ್ಯ ಮುಗಿಸಿ ಮನೆ ಸೇರುವಂತೆ ಅವಕಾಶ ನೀಡಬೇಕು. ಕರ್ತವ್ಯದ ಅವಧಿ ಬೆಳಗ್ಗಿನಿಂದ ಸಂಜೆ 6 ಗಂಟೆಗೆ ಕೊನೆಗೊಳಿಸುವಂತೆ ಪೊಲೀಸ್ ಕಮಿಷನರ್ ಆದೇಶ ಮಾಡಿದ್ದಾರೆ.