LATEST NEWS
ಐವನ್ ಡಿಸೋಜಾ ವಿರುದ್ದ ಎಫ್ಐಆರ್ ದಾಖಲಿಸಲು ಪೊಲೀಸರಿಗೆ 24 ಗಂಟೆ ಗಡುವು ನೀಡಿದ ಬಿಜೆಪಿ ಯುವ ಮೋರ್ಚಾ
ಮಂಗಳೂರು ಅಗಸ್ಟ್ 21: ರಾಜ್ಯಪಾಲರಿಗೂ ಬಾಂಗ್ಲಾ ದೇಶದ ಪ್ರಧಾನಮಂತ್ರಿಯವರ ಸ್ಥಿತಿಯೇ ಬರಲಿದೆ ಎಂದು ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ವಿರುದ್ಧ ಎಫ್‌ಐಆರ್ ದಾಖಲಿಸಲು ಬರ್ಕೆ ಠಾಣೆಯ ಪೊಲೀಸರಿಗೆ ಬಿಜೆಪಿ ಯುವ ಮೋರ್ಚಾ 24 ಗಂಟೆಗಳ ಗಡುವು ನೀಡಿದೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಪೊಲೀಸ್ ಅಧಿಕಾರಿಗಳ ಮಾತಿನಂತೆ ಯುವಮೋರ್ಚಾದ ಪ್ರಮುಖರು ಮಾತ್ರ ಠಾಣೆಗೆ ಬಂದು ಎಸಿಪಿಯವರ ಜತೆ ಮಾತುಕತೆ ನಡೆಸಿದ್ದೇವೆ.
ನಾವು ದೂರು ನೀಡಿ 48 ಗಂಟೆಗಳಾಗಿದ್ದರೂ ಪೊಲೀಸರು ಇನ್ನೂ ಕೂಡ ಕಾನೂನು ಸಲಹೆ ಪಡೆಯುವ ಬಗ್ಗೆಯೇ ಮಾತನಾಡುತ್ತಿದ್ದಾರೆ ಹೊರತು ಎಫ್‌ಐಆರ್ ದಾಖಲಿಸುತ್ತಿಲ್ಲ. ಪೊಲೀಸರು ವಿಳಂಬ ಮಾಡುತಿದ್ದಾರೆ. ಎಫ್‌ಐಆರ್ ದಾಖಲಿಸಲು 24 ಗಂಟೆಗಳ ಅವಧಿ ನೀಡುತ್ತೇವೆ. ಅನಂತರವೂ ಎಫ್‌ಐಆರ್ ದಾಖಲಾಗದಿದ್ದರೆ ಜಿಲ್ಲೆೆಯಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದರು.
ಯುವಮೋರ್ಚಾದ ಪ್ರಮುಖರು ಠಾಣೆಗೆ ಆಗಮಿಸಿ ಮಂಗಳೂರು ಕೇಂದ್ರ ಎಸಿಪಿ ಪ್ರತಾಪ್ ಸಿಂಗ್ ಥಾರೋಟ್ ಅವರ ಜತೆ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದರು.ಬಳಿಕ ಪದಾಧಿಕಾರಿಗಳು ಗಡುವು ನೀಡಿ ಅಲ್ಲಿಂದ ತೆರಳಿದರು. ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.