LATEST NEWS
ಅಮೇರಿಕಾದಲ್ಲಿ ಐಟಿ ಕೆಲಸ ಮಾಡಿ ಮಂಗಳೂರಿನಲ್ಲಿ ವಾಸವಿದ್ದ ವ್ಯಕ್ತಿಯಿಂದಲೇ 1.70 ಕೋಟಿ ವಸೂಲಿ ಮಾಡಿದ ಸೈಬರ್ ವಂಚಕರು..!!
ಮಂಗಳೂರು ನವೆಂಬರ್ 22: ಪ್ರತೀ ಬಾರಿ ಸೈಬರ್ ವಂಚಕರ ಬಲೆಗೆ ಜನಸಾಮಾನ್ಯರು ಬೀಳುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಮೇರಿಕದಲ್ಲಿ ಐಟಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬನ್ನು ಬಲೆಗೆ ಬಿಳಿಸಿಕೊಂಡ ಸೈಬರ್ ವಂಚಕರು ಬರೋಬ್ಬರಿ 1.70 ಕೋಟಿ ವಸೂಲಿ ಮಾಡಿದ್ದಾರೆ.
ಸೈಬರ್ ವಂಚಕರ ಬಗ್ಗೆ ಜನರಿಗೆ ಎಷ್ಟೇ ಮಾಹಿತಿ ನೀಡಿದರೂ ಮತ್ತೆ ಮತ್ತೆ ಸೈಬರ್ ವಂಚಕರ ಬಲೆಗೆ ಬಿಳುತ್ತಿದ್ದಾರೆ. ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಇರುವ ವ್ಯಕ್ತಿಯೊಬ್ಬ ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾನೆ. ಸದ್ಯ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಮೂಲತಃ ಮುಂಬಯಿಯವರಾಗಿದ್ದು, ಈ ಮೊದಲು ಅಮೆರಿಕದಲ್ಲಿ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿಂದ ವಾಪಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿ ವಾಸವಾಗಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ಇದ್ದರು. ಉದ್ಯೋಗದ ಮೂಲಕ ಮಾಡಿದ ಉಳಿತಾಯದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನ. 11ರಂದು ದೂರುದಾರರು ಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಟ್ರಾಯ್ ಪ್ರತಿನಿಧಿ ಎಂದು ಕರೆ ಮಾಡಿದ್ದಾನೆ. ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬಯಿನ ಅಂಧೇರಿ (ಪೂ)ದಲ್ಲಿ ಅದರ ಮೂಲಕ ಹಲವು ಕಾನೂನು ಬಾಹಿರ ಚಟುವಟಿಕೆ ನಡೆದಿವೆ. ಮಾರ್ಕೆಟಿಂಗ್ ನೆಪದಲ್ಲಿ ಆ ಮೊಬೈಲ್ ನಂಬರ್ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿರುವ ಬಗ್ಗೆ ಎಫ್ಐಆರ್ ಆಗಿದೆ. ಕೂಡಲೇ ಅಂಧೇರಿ ಪೂರ್ವ ಠಾಣೆಯನ್ನು ಸಂಪರ್ಕಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದ.
‘ನಂತರ ಇನ್ನೊಬ್ಬರು ಕರೆ ಮಾಡಿ, ಪ್ರದೀಪ್ ಸಾವಂತ್ ಎಂದು ಪರಿಚಯಿಸಿಕೊಂಡು ಮಾತನಾಡಿದ್ದ. ನರೇಶ್ ಗೋಯೆಲ್ ವಂಚನೆ ಪ್ರಕರಣ ಹಾಗೂ ಅಕ್ರಮ ಹಣ ವರ್ಗಾವಣೆ ಯೋಜನೆಯಲ್ಲಿ ನಾನು ಭಾಗಿಯಾಗಿದ್ದು, ಈ ಬಗ್ಗೆ ಮತ್ತೊಂದು ಎಫ್ಐಆರ್ ಕೂಡಾ ದಾಖಲಾಗಿದೆ. ಅಂಧೇರಿಯ ಕೆನರಾ ಬ್ಯಾಂಕಿನ ಶಾಖೆಯಲ್ಲಿ ನನ್ನ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದೆ. ಇದಕ್ಕೆ ನನ್ನ ಗುರುತಿನ ಚೀಟಿ ಬಳಸಿ ಸಿಮ್ ಖರೀದಿಸಲಾಗಿದೆ. ಈ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಲಿದ್ದೇವೆ ಎಂದು ಆತ ತಿಳಿಸಿದ್ದ. ಬಳಿಕ ಮೊಬೈಲ್ಗೆ ವಾಟ್ಸ್ ಆ್ಯಪ್ನಲ್ಲಿ ವಿಡಿಯೊ ಕರೆ ಬಂದಿತ್ತು. ಅದರಲ್ಲಿ ಕಾಣಿಸಿಕೊಂಡ ಇಬ್ಬರು ತಮ್ಮನ್ನು ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಹಾಗೂ ಸಿಬಿಐ ಮಹಿಳಾ ಅಧಿಕಾರಿ ಆಕಾಂಕ್ಷಾಎಂದು ಪರಿಚಯಿಸಿಕೊಂಡರು. ನನ್ನ ವಿರುದ್ಧ ಸಿಬಿಐ ಕಚೇರಿಯಲ್ಲಿ ಪ್ರಕರಣ ದಾಖಲಾದ ಹಾಗೆ ನಕಲಿಯ ದಾಖಲೆ ಸೃಷ್ಟಿಸಿ ನನ್ನ ವಾಟ್ಸ್ ಆ್ಯಪ್ಗೆ ಕಳುಹಿಸಿದ್ದರು.ಈ ಪ್ರಕರಣದಿಂದ ಮುಕ್ತಗೊಳಿಸಲು ಹಣದ ಬೇಡಿಕೆ ಇಟ್ಟರು. ಭಯಗೊಂಡ ನಾನು ಆರ್ಟಿಜಿಎಸ್ ಮೂಲಕ ಹಾಗೂ ಆನ್ಲೈನ್ ಮೂಲಕ ಹಂತ ಹಂತವಾಗಿ ₹ 53 ಲಕ್ಷ, ₹ 74 ಲಕ್ಷ, ₹ 44 ಲಕ್ಷ ಸೇರಿ ಒಟ್ಟು ₹1.71 ಕೋಟಿ ಹಣವನ್ನು ಅವರು ಸೂಚಿಸಿದ ಬೇರೆ ಬೇರೆ ಖಾತೆಗಳಿಗೆ ನ.13ರಿಂದ ನ. 19ರ ನಡುವೆ ವರ್ಗಾಯಿಸಿದ್ದೇನೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.