Connect with us

DAKSHINA KANNADA

ವಿಶ್ವವಿಖ್ಯಾತ ಮಂಗಳೂರು ದಸರಾದ ಹೆಸರಿನಲ್ಲಿ ಜನತೆಯ ಲಕ್ಷಾಂತರ ಹಣ ಲೂಟಿಗೈದಿರುವುದು ಸರಿಯಲ್ಲ

ಮಂಗಳೂರು, ಅಕ್ಟೋಬರ್ 10: ಕೋಟ್ಯಂತರ ಜನತೆಯ ಹೃದಯ ಗೆದ್ದಂತಹ ವಿಶ್ವವಿಖ್ಯಾತ ಮಂಗಳೂರು ದಸರಾ – 2021 ರ ಹೆಸರಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಕೇವಲ ಬೀದಿ ದೀಪಾಲಂಕಾರಕ್ಕಾಗಿ ಸುಮಾರು 38 ಲಕ್ಷ ರೂ.ಯಷ್ಟು ಹಣವನ್ನು ಖರ್ಚು ಮಾಡುವ ಪ್ರಸ್ತಾಪಕ್ಕೆ ಈಗಾಗಲೇ ಮಂಗಳೂರಿನಾದ್ಯಂತ ವ್ಯಾಪಕ ವಿರೋಧ ಕಂಡುಬಂದಿದ್ದು, ಜನತೆಯ ಹಣವನ್ನು ಈ ರೀತಿ ವಿನಾಃ ಕಾರಣ ಪೋಲು ಮಾಡುವ ನಗರ ಪಾಲಿಕೆ ಆಡಳಿತದ ಕ್ರಮ ಸರ್ವಥಾ ಸರಿಯಲ್ಲ ಎಂದು ಸಿ ಪಿ ಐ ಎಮ್ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಂಪ್ರತಿ ನವರಾತ್ರಿ ಉತ್ಸವವು ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆಯುವ ಮೂಲಕ ಮಂಗಳೂರು ದಸರಾ ಎಂದೇ ಜನಜನಿತವಾಗಿದ್ದು,ವಿಶ್ವದೆಲ್ಲೆಡೆ ಭಾರೀ ಪ್ರಸಿದ್ಧಿ ಪಡೆದಿದೆ. ಅಂತಹುದರಲ್ಲಿ ಕಳೆದ ವರ್ಷ ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲೂ ಆರ್ಥಿಕ ಪುನಶ್ಚೇತನದ ಭಾಗವಾಗಿ, ಜನರಲ್ಲಿ ಮಾನಸಿಕ ಧೈರ್ಯವನ್ನು ತುಂಬುವ ಸಲುವಾಗಿ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ದಸರಾ ಉತ್ಸವ ನಡೆಯದಂತೆ ಅದೆಷ್ಟೋ ಪಿತೂರಿಗಳನ್ನು ಮಾಡಿದ್ದರೂ ದೇವಸ್ಥಾನದ ಆಡಳಿತ ಮಂಡಳಿಯು ಧ್ರಢವಾಗಿ ನಿಂತು ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಿರುವುದು ಮಾತ್ರವಲ್ಲದೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಪ್ರಶಂಸೆಗೂ ಪಾತ್ರವಾಗಿದೆ.

ಮಾತ್ರವಲ್ಲದೆ 75 ಲಕ್ಷಕ್ಕಿಂತಲೂ ಅಧಿಕ ಹಣವು ಉಳಿತಾಯವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಅಂತಹುದರಲ್ಲಿ ಕುದ್ರೋಳಿ ದೇವಸ್ಥಾನವು ಆರ್ಥಿಕವಾಗಿ ಭಾರೀ ಸಂಕಷ್ಟದಲ್ಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಉಲ್ಲೇಖ ಪತ್ರದಲ್ಲಿ ನಮೂದಿಸರಬೇಕಾದರೆ ದೇವಸ್ಥಾನದ ಆಡಳಿತ ಮಂಡಳಿಯು ಮನಪಾದಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡಿತ್ತೇ, ಆರ್ಥಿಕ ಸಹಾಯಕ್ಕಾಗಿ ಬೇಡಿಕೆ ಇಟ್ಟಿತ್ತೇ ಎಂಬುದು ಸಾರ್ವಜನಿಕವಾಗಿ ಗೊತ್ತಾಗಬೇಕು.

ಎಂತಹ ಸಂಕಷ್ಟದ ಕಾಲದಲ್ಲೂ ಸರಕಾರದ ನಯಾಪೈಸೆಯನ್ನೂ ಪಡೆಯದೆ ಭಕ್ತಾದಿಗಳ ಬೆವರು ಸುರಿಸಿದ ಹಣದಲ್ಲೇ ಮಂಗಳೂರು ದಸರಾ ನಡೆಯುತ್ತಿರುವ ಹೆಮ್ಮೆಯ ವಿಚಾರ ಒಂದೆಡೆಯಾದರೆ, ಕೇವಲ ಬೀದಿ ದೀಪಾಲಂಕಾರಕ್ಕಾಗಿ ಜನತೆಯ ತೆರಿಗೆಯ ಹಣವನ್ನು ಮಂಗಳೂರು ದಸರಾದ ಹೆಸರಿನಲ್ಲಿ ಖರ್ಚು ಮಾಡುತ್ತಿರುವುದು ದೇವಸ್ಥಾನದ ಗೌರವಕ್ಕೆ ಕುಂದು ಉಂಟಾಗಿಲ್ಲವೇ….?

ಪ್ರತೀ ವರ್ಷವೂ ಬೀದಿ ದೀಪಾಲಂಕಾರವನ್ನು ಸ್ಥಳೀಯ ಭಕ್ತರು, ವಿವಿಧ ಸಂಘ ಸಂಸ್ಥೆಗಳು ಸ್ವಯಂಸ್ಪೂರ್ತಿಯಿಂದ ದಸರಾ ಮೆರವಣಿಗೆ ಸಾಗುವ ಬೀದಿಗಳಲ್ಲಿ ದೀಪಾಲಂಕಾರ ಮಾಡುತ್ತಿದ್ದುದ್ದರ ಮೂಲಕ ದೇವಸ್ಥಾನದ ಖಜಾನೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈ ಬಾರಿ ಅಂತಹ ಭಕ್ತಾದಿಗಳ ಮನಸ್ಸಿಗೆ ಘಾಸಿಗೊಳಿಸಿ, ದಸರಾ ತಯಾರಿಗಾಗಿ ನಡೆದ ಸಭೆಯಲ್ಲಿ ಎಲ್ಲರನ್ನೂ ದಾರಿ ತಪ್ಪಿಸಿ, ಏಕಾಏಕಿಯಾಗಿ ಅವರ ಕೈಯಿಂದ ಕಿತ್ತೊಗೆದು ಮಂಗಳೂರು ಮಹಾನಗರ ಪಾಲಿಕೆಯು ದೀಪಾಲಂಕಾರ ಮಾಡುವುದರ ಹಿಂದಿನ ಮಸಲತ್ತು ಕುತಂತ್ರ ಯಾರಿಗೆ ತಾನೆ ಗೊತ್ತಾಗುವುದಿಲ್ಲ…….

ಮಂಗಳೂರು ನಗರದಲ್ಲಿ ಅದೆಷ್ಟೋ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ನಾಗರಿಕರು ಗೋಗರೆದರೆ, ತಮ್ಮಲ್ಲಿ ಹಣವಿಲ್ಲ ಎಂಬ ರೆಡಿಮೇಡ್ ಉತ್ತರ ಕೊಡುವ ಮನಪಾಕ್ಕೆ ಈಗ ಒಮ್ಮಿಂದೊಮ್ಮೆಲೇ 38 ಲಕ್ಷ ರೂ.ಹಣವನ್ನು ಖರ್ಚು ಮಾಡಲು ಆಗುತ್ತದೆಯೇ,  ಕಳೆದ ವರ್ಷದ ತನಕ ವಿವಿಧ ಸಂಘಸಂಸ್ಥೆಗಳು ಆಯೋಜಿಸುತ್ತಿದ್ದ ಬೀದಿ ದೀಪಾಲಂಕಾರದ ಎಲ್ಲಾ ಖರ್ಚನ್ನು ಒಟ್ಟು ಸೇರಿಸಿದರೂ ಆಗುತ್ತಿದ್ದದ್ದು 15 ಲಕ್ಷದವರೆಗೆ ಮಾತ್ರ.ಅಂತಹದರಲ್ಲಿ 38 ಲಕ್ಷ ರೂ. ಖರ್ಚು ಮಾಡುತ್ತಿರುವುದು ದೇವರ ಹೆಸರಿನಲ್ಲಿ ಹಣ ಲೂಟಿ ಮಾಡಿದಂತಾಗುವುದಿಲ್ಲವೇ, ಜನರ ತೆರಿಗೆ ಹಣವನ್ನು ಈ ರೀತಿ ದುರುಪಯೋಗ ಮಾಡಿ ಕುದ್ರೋಳಿ ಶ್ರೀ ಕ್ಷೇತ್ರದ ಘನತೆ ಗೌರವಕ್ಕೆ ಚ್ಯುತಿ ಮಾಡಿರುವುದು ಎಷ್ಟು ಸರಿ ಎಂದು ಸುನಿಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *