KARNATAKA
ರಾಜಕಾಲುವೆ ಒತ್ತುವರಿ ಹಿಂದೆ IT ಕಂಪನಿಗಳ ಕೈವಾಡವೂ ಇದೆ: ಸಂತೋಷ್ ಹೆಗ್ಡೆ
ಧಾರವಾಡ, ಸೆಪ್ಟೆಂಬರ್ 11: ಬೆಂಗಳೂರಿನ ರಾಜಕಾಲುವೆ ಒತ್ತುವರಿಯ ಹಿಂದೆ ಐಟಿ ಕಂಪನಿಗಳ ಕೈವಾಡವೂ ಇದೆ, ಆಗರ್ಭ ಶ್ರೀಮಂತರ ಕಟ್ಟಡದಿಂದಲೂ ಒತ್ತುವರಿಯಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿಂದು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನಸಂಖ್ಯೆ ಜಾಸ್ತಿಯಾದಂತೆ ಬಡಾವಣೆಗಳೂ ಜಾಸ್ತಿಯಾಗ್ತಿವೆ. ಸುಭಾಷ್‌ನಗರ ಬಸ್ ನಿಲ್ದಾಣ ಕೆರೆಯಾಗಿತ್ತು, ಸಂಪಂಗಿಯಲ್ಲಿ ಕ್ರೀಡಾಂಗಣ ಮಾಡಿದ್ದಾರೆ. ಅಕ್ಕಿ ತಿಮ್ಮನ ಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ ಮಾಡಿದ್ದಾರೆ. ಎಲ್ಲ ಕೆರೆಗಳನ್ನು ಬಿಡಿಎ ಮುಖಾಂತರ ಲಾಭಕ್ಕಾಗಿ ಬಳಕೆ ಮಾಡಿದ್ದಾರೆ. ಇದರಲ್ಲಿ ಜನರ ಹಾಗೂ ಅಧಿಕಾರದಲ್ಲಿ ಇದ್ದವರ, ಇಲ್ಲದವರ ದುರಾಸೆಯೂ ಇದೆ. ಐಟಿ ಕಂಪನಿಗಳ ಕೈವಾಡವೂ ಇದೆ. ಆಗರ್ಭ ಶ್ರೀಮಂತರ ಕಟ್ಟಡಗಳಿಂದಲೂ ಒತ್ತುವರಿಯಾಗಿದೆ ಎಂದು ದೂರಿದ್ದಾರೆ.
ಎರಡು ವರದಿ ಕೊಟ್ಟಿದ್ದೇನೆ: ಬಹಳ ಹಿಂದೆಯೇ ನಾನು ರಾಜಕಾಲುವೆ ಒತ್ತುವರಿ ಬಗ್ಗೆ ಎರಡು ವರದಿ ಕೊಟ್ಟಿದ್ದೇನೆ. ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಹಾಗೂ ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ. ಮಹಾರಾಜರು ಹಿಂದೆ ಮಳೆ ನೀರು ಸಂಗ್ರಹಿಸುವ ಉದ್ದೇಶದಿಂದ ನೂರಾರು ಕೆರೆ ಕಟ್ಟಿದ್ರು. ಮಳೆ ಬಂದಾಗ ಅಲ್ಲಿಗೇ ನೀರು ಹರಿದು ಹೋಗುತ್ತಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುಮಾರು 200 ಕೆರೆಗಳಿದ್ದವು. ಭಾಷಾವಾರು ಪ್ರಾಂತ್ಯ ಆದಾಗ ಬೆಂಗಳೂರು ರಾಜಧಾನಿ ಆಯಿತು. ಅಗ ಇಲ್ಲಿ ದಿಢೀರ್ ಜನಸಂಖ್ಯೆ ಹೆಚ್ಚಾಯ್ತು. ಆದರೆ ಸರ್ಕಾರ ಯೋಜನೆ ಮಾಡಿ ಜಾಗ ಕೊಡೋದನ್ನು ಬಿಟ್ಟು ರಾಜಕಾಲುವೆ ಒತ್ತುವರಿ ಮಾಡಲು ಅವಕಾಶ ಮಾಡಿಕೊಡ್ತು. ನೀರು ಹೋಗುವ ರಾಜಕಾಲುವೆ ಈಗ ಅಲ್ಲಿ ಇಲ್ಲಾ, ಈಗ ಮಳೆ ಬಂದರೆ ನೀರು ಹೋಗಲೂ ಜಾಗ ಇಲ್ಲಾ, ಎಲ್ಲಾ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಕೆಲವರು ತಮ್ಮ ಲಾಭಕ್ಕಾಗಿ ಒತ್ತುವರಿ ಮಾಡಿದ್ದೂ ಇದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಬೆಂಗಳೂರಿನಲ್ಲಿ ಮಳೆಯಾಗಿದೆ. ಹಿಂದೆ ಕೆರೆ ನೀರು ಹೋಗಲು ಒಂದು ಸಿಸ್ಟಮ್ ಇತ್ತು. ಹಿಂದೆ ಬೆಂಗಳೂರಿಗೆ ಗಾರ್ಡನ್ ಸಿಟಿ, ಏರ್ ಕಂಡೊಷನ್ ಸಿಟಿ ಅಂತಿದ್ರು, 70ರ ದಶಕವರೆಗೆ ಆರ್ಮಿ ಅವರಿಗೆ ಫ್ಯಾನ್ ಇರಲಿಲ್ಲ, ಅಷ್ಟು ತಣ್ಣನೆಯ ಗಾಳಿ ಇತ್ತು. ಇವತ್ತು ಬಿಸಿಲು ಜಾಸ್ತಿಯಾಗಿದೆ, ಕೆರೆ ಇಲ್ಲದಂತಾಗಿದೆ. ಇದೆಲ್ಲವೂ ಮನುಷ್ಯನ ದುರಾಸೆಯ ಪ್ರತಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.