LATEST NEWS
ಹೆಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ಮುಂದಾದ ಇಸ್ರೇಲ್
ಜೆರುಸಲೇಂ ನವೆಂಬರ್ 25: ಇಸ್ರೇಲ್ ಹಾಗೂ ಲೆಬನಾನ್ ನ ಹೆಜ್ಬುಲ್ಲಾ ಸಂಘಟನೆಗಳ ನಡುವೆ ನಡೆಯುತ್ತಿದ್ದ ಯುದ್ದ ಅಂತ್ಯ ಕಾಣುವ ಸಾಧ್ಯತೆ ಇದೆ. ಇದೀಗ ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೆಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಗಾಜಾದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಬಳಿಕ ಇಸ್ರೇಲ್ ಹಮಾಸ್ ಉಗ್ರರ ಮೇಲೆ ಮುಗಿಬಿದ್ದಿತ್ತು. ಇದೀಗ ಬಹುತೇಕ ಹಮಾಸ್ ಉಗ್ರರನ್ನು ಇಸ್ರೇಲ್ ಸದೆಬಡಿದಿದೆ.
ಈ ನಡುವೆ ಇಸ್ರೇಲ್ ವಿರುದ್ದ ಲೆಬನಾನ್ ನ ಹೆಜ್ಬುಲ್ಲಾ ಸಂಘಟನೆ ಯುದ್ದ ಸಾರಿತ್ತು, ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ಹೆಜ್ಬುಲ್ಲಾ ವಿರುದ್ದ ಇಸ್ರೇಲ್ ಭೀಕರ ದಾಳಿ ಮುಂದುವರೆಸಿದೆ. ಇದೀಗ ಅಮೇರಿಕಾದಲ್ಲಿ ನೂತನ ಅಧ್ಯಕ್ಷರ ಪದಗ್ರಹಣದ ಬೆನ್ನಲ್ಲೇ ಶಾಂತಿ ಮಾತುಕತೆ ಮುಂದುವರೆದಿದೆ.
ಕೆಲವು ಪ್ರಮುಖ ಅಂಶಗಳನ್ನು ಇನ್ನೂ ಮಾತುಕತೆ ನಡೆಸಲಾಗುತ್ತಿದೆ ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರೆಗೆ ಒಪ್ಪಂದವನ್ನು ಅಂತಿಮವೆಂದು ಪರಿಗಣಿಸಲಾಗುವುದಿಲ್ಲ ಎಂದು ಹಲವು ಮೂಲಗಳು ತಿಳಿಸಿವೆ. ಕದನ ವಿರಾಮ ಒಪ್ಪಂದ ಅಂತಿಮವಾದ ನಂತರ ಇಸ್ರೇಲ್ ಕ್ಯಾಬಿನೆಟ್ ಕೂಡ ಅನುಮೋದಿಸಬೇಕಾಗಿದೆ. “ನಾವು ಒಪ್ಪಂದದ ಕಡೆಗೆ ಸಾಗುತ್ತಿದ್ದೇವೆ, ಆದರೆ ಪರಿಹರಿಸಲು ಇನ್ನೂ ಕೆಲವು ಸಮಸ್ಯೆಗಳಿವೆ” ಎಂದು ಇಸ್ರೇಲ್ ಸರಕಾರದ ವಕ್ತಾರ ಡೇವಿಡ್ ಮೆನ್ಸರ್ ಹೆಚ್ಚಿನ ವಿವರ ನೀಡದೆ ,ಮಾಧ್ಯಮ ಹೇಳಿಕೆ ನೀಡಿದ್ದಾರೆ. ಲೆಬನಾನಿನ ಶಿಯಾ ಇಸ್ಲಾಮಿಸ್ಟ್ ರಾಜಕೀಯ ಪಕ್ಷ ಮತ್ತು ಅರೆಸೈನಿಕ ಗುಂಪು ಹೆಜ್ಬುಲ್ಲಾ ಇಸ್ರೇಲ್ ನೊಂದಿಗೆ ಸಮರ ನಿರತವಾಗಿತ್ತು.