LATEST NEWS
ಗಾಜಾ ಮೇಲೆ ಮುಗಿಬಿದ್ದ ಇಸ್ರೇಲ್ 200ಕ್ಕೂ ಅಧಿಕ ಮಂದಿ ಬಲಿ

ಇಸ್ರೇಲ್ ಮಾರ್ಚ್ 18: ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದ ಹಮಾಸ್ ಉಗ್ರರ ಮೇಲೆ ಇಸ್ರೇಲ್ ಮುಗಿಬಿದ್ದಿದ್ದು, ಇಂದು ಬೆಳಿಗ್ಗೆ ಏಕಾಏಕಿ ಇಸ್ರೇಲ್ ಸೇನೆಯ ವಾಯುದಾಳಿಗೆ ಕನಿಷ್ಠ 200ಕ್ಕೂ ಅಧಿಕ ಮಂದಿ ಸಾವನಪ್ಪಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬೆಳ್ಳಂ ಬೆಳಗ್ಗೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್, ಉತ್ತರ ಗಾಜಾ, ಗಾಜಾ ನಗರ ಮತ್ತು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯ ದೇರ್ ಅಲ್-ಬಲಾಹ್, ಖಾನ್ ಯೂನಿಸ್ ಮತ್ತು ರಫಾ ಸೇರಿದಂತೆ ಅನೇಕ ಸ್ಥಳಗಳನ್ನು ಧ್ವಂಸಗೊಳಿಸಿದೆ. ಭೀಕರ ವಾಯುದಾಳಿಯಲ್ಲಿ ಮೃತಪಟ್ಟವರ ಪೈಕಿ ಪ್ಯಾಲೆಸ್ತೀನಿನ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೆಚ್ಚಿನವರು ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ. ಕದನ ವಿರಾಮ ಘೋಷಣೆಯ ಬಳಿಕ ಒಪ್ಪಂದದ ಪ್ರಕಾರ ಬಾಕಿಯಿರುವ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರಾಕರಿಸಿದ ನಂತರ ಇಸ್ರೇಲ್ ದಾಳಿ ನಡೆಸಿರುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ದಾಳಿ ನಡೆಸುವುದಕ್ಕೂ ಮುನ್ನವೇ ಇಸ್ರೇಲ್ ಎಚ್ಚರಿಸುವ ಕೆಲಸ ಮಾಡಿತ್ತು. ತನ್ನ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಇಸ್ರೇಲ್ ಸೇನೆ, ಜಾಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆ ಸೇರಿದ ನೆಲೆಗಳ ಮೇಲೆ ಇಸ್ರೇಲ್ ಸೇನೆ ವ್ಯಾಪಕ ದಾಳಿ ನಡೆಸುತ್ತಿದೆ. ಹೀಗಾಗಿ ಗಾಜಾದ ನೆರೆಯ ಶಾಲೆಗಳನ್ನು ಮುಚ್ಚುವಂತೆ ಆದೇಶಿಸುತ್ತಿದೆ ಎಂದು ಎಚ್ಚರಿಕೆ ನೀಡಿತ್ತು.