KARNATAKA
ಬೀದರ್ ನಲ್ಲಿ ಜನ ಸ್ಪಂದನ ಕಾರ್ಯಕ್ರಮ-ಗ್ಯಾರಂಟಿಗಳ ಅನುಷ್ಠಾನಕ್ಕೆ ಈಶ್ವರ ಖಂಡ್ರೆ ಆದೇಶ..!
ಈ ಹಿಂದೆ ರಾಜ ಮಹಾರಾಜರ ಕಾಲದಲ್ಲಿ ದೊರೆತನಕ ದೂರು ಒಯ್ಯುತ್ತಿದ್ದರು. ಈಗ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಯಾವುದೇ ಕಾರಣಕ್ಕೂ ಬೀದರ್ ಜನರು 700 ಕಿ.ಮೀ. ದೂರದ ಬೆಂಗಳೂರಿಗೆ ಹೋಗಿ ದೂರು ನೀಡದ ರೀತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಕಿವಿಮಾತು ಹೇಳಿದ್ದಾರೆ.
ಬೀದರ್ : ಈ ಹಿಂದೆ ರಾಜ ಮಹಾರಾಜರ ಕಾಲದಲ್ಲಿ ದೊರೆತನಕ ದೂರು ಒಯ್ಯುತ್ತಿದ್ದರು. ಈಗ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಯಾವುದೇ ಕಾರಣಕ್ಕೂ ಬೀದರ್ ಜನರು 700 ಕಿ.ಮೀ. ದೂರದ ಬೆಂಗಳೂರಿಗೆ ಹೋಗಿ ದೂರು ನೀಡದ ರೀತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಕಿವಿಮಾತು ಹೇಳಿದ್ದಾರೆ.
ಬೀದರ್ ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿಂದು ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಚಾಲನೆ ನೀಡಿ ಮಾತನಾಡಿದರು.
ಇಂದು ಜನಸಂಖ್ಯೆ ಹೆಚ್ಚಾಗಿದೆ. ಜನರ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಬೀದರ್ ಜಿಲ್ಲೆಯಲ್ಲಿ ಸುಮಾರು 15 ಲಕ್ಷ ಜನರಿದ್ದು, ವೈಯಕ್ತಿಕ ಸಮಸ್ಯೆಗಳೂ ಇರುತ್ತವೆ. ಸಾಮೂಹಿಕ ಸಮಸ್ಯೆಗಳೂ ಇರುತ್ತವೆ.
ಈ ನಿಟ್ಟಿನಲ್ಲಿ ಜನರು ಸರ್ಕಾರಿ ಕಚೇರಿಗಳಿಗೆ ಸೇವೆ ಪಡೆಯಲು ಬಂದಾಗ ಮಾನವೀಯತೆಯ ನೆಲೆಗಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು.
ಸರ್ಕಾರಿ ನೌಕರಿ ತಮಗೆ ಜನಸೇವೆ ಮಾಡಲು ದೊರೆತಿರುವ ಅವಕಾಶ ಎಂದು ತಿಳಿದು, ಜನರಿಗೆ ಕಾನೂನಿನ ಚೌಕಟ್ಟಿನೊಳಗೆ ಮತ್ತು ತಮ್ಮ ಇತಿಮಿತಿಯಲ್ಲಿ ನಿಯಮಬದ್ಧವಾಗಿ ಭ್ರಷ್ಟಾಚಾರ ಮುಕ್ತವಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಇಂದು ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸುಮಾರು 40 ಕೌಂಟರ್ ಗಳನ್ನು ತೆರೆಯಲಾಗಿದೆ.
ಈ ಎಲ್ಲ ಕೌಂಟರ್ ಗಳಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿ ಪ್ರತಿಯೊಬ್ಬರಿಗೂ ಒಂದೊಂದು ದೂರು ಸಂಖ್ಯೆ ನೀಡಿ, ಆದ್ಯತೆಯ ಮೇಲೆ ಈ ಎಲ್ಲ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ.
ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕುಂದು ಕೊರತೆಗಳ ಕುರಿತು ಸುಮಾರು 300 ಅರ್ಜಿಗಳು ಬಂದಿದ್ದು ಆದ್ಯತೆ ಮೇರೆಗೆ 1 ವಾರದೊಳಗೆ ಸಮಸ್ಯೆ ಪರಿಹರಿಸಲು ನಾನು ಖುದ್ದಾಗಿ ಪ್ರಯತ್ನಿಸುತ್ತೇನೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಗ್ಯಾರಂಟಿಗಳ ಅನುಷ್ಠಾನಕ್ಕೆ ಈಶ್ವರ ಖಂಡ್ರೆ ಆದೇಶ :
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದ್ದು ಐದೂ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆ ಅಡಿ ಕೋಟ್ಯಂತರ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
ಇನ್ನು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದ್ದು, ಉಳಿದ 5 ಕೆ.ಜಿ. ಹಣವನ್ನು ನೇರ ಸವಲತ್ತು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ.
ನಾಳೆ ಗೃಹಲಕ್ಷಿ ಯೋಜನೆಯಡಿ ಮನೆಯ ಯಜಮಾನಿಗೆ ತಲಾ 2 ಸಾವಿರ ರೂಪಾಯಿ ನಗದು ವರ್ಗಾವಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಸತ್ ಸದಸ್ಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧೀ ಮೈಸೂರಿನಲ್ಲಿ 30ರಂದು ಚಾಲನೆ ನೀಡಲಿದ್ದಾರೆ.
ಈಗಾಗಲೇ ಸರಾಸರಿ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಯೂ ಕಾರ್ಯಗತವಾಗಿದೆ.
ಇನ್ನುಳಿದ ಒಂದು ಯೋಜನೆ ನಿರುದ್ಯೋಗಿ ಯುವಜನರಿಗೆ ಭತ್ಯೆ ನೀಡುವುದಾಗಿದ್ದು, ಅದನ್ನೂ ಸರ್ಕಾರ ಜಾರಿಗೆ ತರಲು ಕಾರ್ಯೋನ್ಮುಖವಾಗಿದೆ.
ಈ ಯೋಜನೆಗಳ ಲಾಭ ಪ್ರತಿಯೊಬ್ಬ ದುರ್ಬಲ, ವಂಚಿತರಿಗೂ ದೊರಕಬೇಕು. ಯಾವುದೇ ಒಬ್ಬ ವ್ಯಕ್ತಿ ಗ್ಯಾರಂಟಿಗಳ ಫಲ ದೊರಕದೆ ವಂಚಿತರಾಗಬಾರದು.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಗ್ಯಾರಂಟಿಯ ಪ್ರಯೋಜನ ಪಡೆಯುವಲ್ಲಿ ಇರುವ ತೊಡಕುಗಳನ್ನು ನಿವಾರಿಸುವಂತೆ ಸೂಚಿಸಿದರು.