KARNATAKA
“ಯುಟಿ ಖಾದರ್ ಕಾಂಗ್ರೆಸ್ ಪಕ್ಷದ ನಾಯಕರೋ? ಕಾಂಗ್ರೆಸ್ ಪಕ್ಷದ ವಕ್ತಾರರೋ? “; ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು : ಮಾನ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್ ಅವರು ಸರ್ಕಾರದ ಕಾಮಗಾರಿಯ ಉದ್ಘಾಟನೆಯ ಕುರಿತು ಪತ್ರಿಕಾಗೋಷ್ಠಿ ನಡೆಸಲು ಅವರು ಸರ್ಕಾರದ ಭಾಗವೇ? ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ಉದ್ಘಾಟಿಸಲಿರುವ ನಗರದ ಎಮ್ಮೆಕೆರೆ ಈಜುಕೊಳ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇನ್ನಿತರ ಯಾವುದೇ ಜನಪ್ರತಿನಿಧಿಗಳು ಪತ್ರಿಕಾಗೋಷ್ಠಿ ನಡೆಸಿದ್ದರೆ ಅದನ್ನು ಒಪ್ಪಬಹುದು. ಆದರೆ ಸ್ಪೀಕರ್ ಅವರು ಸರ್ಕಾರದ ಭಾಗವಾಗಿ ಪತ್ರಿಕಾಗೋಷ್ಠಿ ನಡೆಸುವುದು ಯಾವುದೇ ಕಾರಣಕ್ಕೂ ಸಮ್ಮತವಲ್ಲ. ಸ್ಪೀಕರ್ ಆದವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷಾತೀತವಾಗಿ ಸ್ಪೀಕರ್ ಸ್ಥಾನ ಅಲಂಕರಿಸುತ್ತಾರೆ. ಆದರೆ ಇಲ್ಲಿ ಮುಖ್ಯಮಂತ್ರಿಗಳು ಸಿಮ್ಮಿಂಗ್ ಪೂಲ್ ಉದ್ಘಾಟನೆಗೆ ಬರಲಿದ್ದಾರೆ ಎಂದು ಸ್ಪೀಕರ್ ಅವರೇ ಪತ್ರಿಕಾಗೋಷ್ಠಿ ನಡೆಸುತ್ತಾರೆಂದರೆ ಅವರು ಕಾಂಗ್ರೆಸ್ ಪಕ್ಷದ ನಾಯಕರೋ? ಕಾಂಗ್ರೆಸ್ ಪಕ್ಷದ ವಕ್ತಾರರೋ? ಎಂಬುದನ್ನು ಸ್ಪಷ್ಟಪಡಿಸಲಿ ಎಂದಿದ್ದಾರೆ. ಗೌರವಾನ್ವಿತ ಸ್ಪೀಕರ್ ಹುದ್ದೆಯಲ್ಲಿದ್ದುಕೊಂಡು ಕಾಂಗ್ರೆಸ್ ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದ ಈ ಹಿಂದಿನ ಯಾವೊಬ್ಬ ಸ್ಪೀಕರ್ ಕೂಡ ಹೀಗೆ ಮಾಡಿದ ಉದಾಹರಣೆ ಇಲ್ಲ. ಇದು ಸ್ಪೀಕರ್ ಸ್ಥಾನಕ್ಕೆ ಶೋಭಿತ ತರುವಂತದ್ದಲ್ಲ. ಮುಂದಿನ ದಿನಗಳಲ್ಲಾದರೂ ಸ್ಪೀಕರ್ ಅವರು ಈ ಬಗ್ಗೆ ಅರಿತುಕೊಳ್ಳಬೇಕು ಎಂದು ಶಾಸಕರು ಗುಡುಗಿದ್ದಾರೆ.