LATEST NEWS
ಗಾಂಜಾದ ಹಬ್ ಆಗುತ್ತಿದೆಯೇ ಅಬ್ಬಕ್ಕ ನಾಡು ಉಳ್ಳಾಲ ?

ಗಾಂಜಾದ ಹಬ್ ಆಗುತ್ತಿದೆಯೇ ಅಬ್ಬಕ್ಕ ನಾಡು ಉಳ್ಳಾಲ ?
ಮಂಗಳೂರು, ಅಕ್ಟೋಬರ್ 12: ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ಇತ್ತೀಚಿನ ದಿನಗಳಲ್ಲಿ ಗಾಂಜಾದ ಎಪಿ ಸೆಂಟರ್ ಆಗುತ್ತಿದೆ ಎನ್ನುವ ಅನುಮಾನಗಳಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವು ಘಟನೆಗಳೇ ಸಾಕ್ಷಿಯಾಗಿವೆ. ಇದೇ ಘಟನೆಗಳ ನಿದರ್ಶನ ನೀಡಿ ಪ್ರತಿಪಕ್ಷಗಳು ಇಂದು ಸರಕಾರದ ವಿರುದ್ಧ ಪ್ರತಿಭಟನೆ ಹಾಗೂ ಹೋರಾಟಗಳನ್ನು ನಡೆಸುತ್ತಿದೆ.
ಜಿಲ್ಲೆಯ ಯಾವುದೇ ಭಾಗದಲ್ಲಿ ಗಾಂಜಾದ ವಿಷಯ ಬಂದಾಗ ಅಲ್ಲಿ ಉಳ್ಳಾಲದ ಕನೆಕ್ಷನ್ ಇದ್ದೇ ಇರುತ್ತೆ. ಅಂದ ಹಾಗೆ ಗಾಂಜಾದ ಹಬ್ ಆಗಿರೋ ಉಳ್ಳಾಲ ಇರೋದು ಕಳ್ಳ ಸಾಗಾಣಿಕೆಗೆಂದೇ ಕುಖ್ಯಾತಿ ಪಡೆದ ಕಾಸರಗೋಡು ಸಮೀಪವೇ. ಉಳ್ಳಾಲಕ್ಕೆ ಇದೇ ಕಾಸರಗೋಡಿನಿಂದ ನಿರಂತರವಾಗಿ ಗಾಂಜಾ ಪೂರೈಕೆ ಆಗುತ್ತಿರುವುದು ಉಳ್ಳಾಲ ಪೋಲೀಸರಿಗೂ, ಕೇರಳದ ಮಂಜೇಶ್ವರ ಪೋಲೀಸರಿಗೂ ತಿಳಿಯದ ವಿಚಾರವೇನಲ್ಲ.

ಕಾಸರಗೋಡು ಹಾಗೂ ಉಳ್ಳಾಲದ ನಡುವೆ ಗಾಂಜಾ ಪೂರೈಸುವ ಪ್ರಮುಖ ಸಾಧನ ಮೀನು ಸಾಗಿಸುವ ಲಾರಿಗಳೇ ಆಗಿದೆ ಎನ್ನುವ ಸ್ಟೋಟಕ ಮಾಹಿತಿ ತಿಳಿದುಬಂದಿದೆ. ದಿನವೊಂದಕ್ಕೆ ನೂರಕ್ಕೂ ಮಿಕ್ಕಿದ ಮೀನಿನ ಲಾರಿಗಳು ಕೇರಳದಿಂದ ಡೈರೆಕ್ಟ್ ಆಗಿ ಉಳ್ಳಾಲ ತಲುಪುತ್ತಿವೆ.
ರಾತ್ರಿ ಹೊತ್ತಿನಲ್ಲೇ ಹೆಚ್ಚಾಗಿ ಈ ಲಾರಿಗಳ ಸಂಚಾರವಿರುವ ಕಾರಣ ಯಾವ ಪೋಲೀಸರೂ ಈ ಲಾರಿಗಳನ್ನು ತಪಾಸಣೆ ಮಾಡುವ ಗೋಜಿಗೂ ಹೋಗುತ್ತಿಲ್ಲ. ಈ ಕಾರಣದಿಂದಾಗಿಯೇ ಗಾಂಜಾ ಡೀಲರ್ ಗಳು ಈ ಲಾರಿಗಳ ಮೂಲಕವೇ ಕೇರಳದೊಂದಿಗಿನ ತನ್ನ ಡೀಲ್ ಗಳನ್ನು ಕುದುರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಉಳ್ಳಾಲದಲ್ಲಿ ಶೇಖರಣೆಗೊಂಡ ಗಾಂಜಾ ಬಳಿಕ ಕಾರು ಹಾಗೂ ದ್ವಿಚಕ್ರ ವಾಹನದ ಮೂಲಕ ಜಿಲ್ಲೆಯ ಹಲವೆಡೆ ಸರಬರಾಜಾಗುತ್ತಿದೆ. ಅಕ್ಟೋಬರ್ 12 ರಂದು ಉಳ್ಳಾಲದ ತೊಕ್ಕೋಟಿನಲ್ಲಿ ಮುಂಜಾನೆ ನಡೆದ ಮಿನಿ ಲಾರಿ ಹಾಗೂ ಸ್ಕೋಟರ್ ನಡುವೆ ಡಿಕ್ಕಿ ಸಂಭವಿಸಿ ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ಸಾವಿಗೀಡಾಗುತ್ತಾನೆ.
ಅಫಘಾತ ಸಂಭವಿಸೋದು, ಸಾವಿಗೀಡಾಗೋದು ಎಲ್ಲಾ ಸ್ವಾಭಾವಿಕವೇ. ಆದರೆ ಇಲ್ಲಿ ಅಫಘಾತದಲ್ಲಿ ಸತ್ತ ಯುವಕನ ಜೇಬಲ್ಲಿ ಎರಡು ಪ್ಯಾಕೇಟ್ ಗಾಂಜಾ ಇದ್ದದ್ದೇ ವಿಶೇಷ. ಈತ ಬೆಳ್ತಂಗಡಿ ನಿವಾಸಿಯಾಗಿದ್ದು, ಅಲ್ಲಿನ ಪರಿಸರಕ್ಕೆ ಸರಬರಾಜು ಮಾಡಲು ಉಳ್ಳಾಲದಿಂದ ಗಾಂಜಾವನ್ನು ಕೊಂಡ್ಯೊಯ್ಯುತ್ತಿದ್ದ ಎನ್ನುವುದಕ್ಕೆ ಇಲ್ಲಿ ಯಾವ ಸಂಶಯವೂ ಇಲ್ಲ. ಅಲ್ಲದೆ ಕರಾವಳಿಯ ಕೆಲವು ಕಡೆಗಳಲ್ಲಿ ಬಟ್ಟೆ ವ್ಯಾಪಾರದ ನೆಪದಲ್ಲಿ ಬುಲೆಟ್ ಬೈಕುಗಳಲ್ಲಿ ನಿರಂತರವಾಗಿ ಗಾಂಜಾ ಸಾಗಾಟವಾಗುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಅಲ್ಲದೆ ಜಿಲ್ಲೆಯಲ್ಲಿರುವ ಕೆಲವು ಪ್ರತಿಷ್ಟಿತ ಶಾಲಾ ಕಾಲೇಜುಗಳ ಮುಂಭಾಗದಲ್ಲೇ ಇರುವ ಕೆಲವು ಗೂಡಂಗಡಿಗಳಲ್ಲಿ ಗಾಂಜಾವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದು, ಇಲ್ಲಿ ಡೈಲಿ ಗಿರಾಕಿಗಳಿಗೆ ನಿರಂತರವಾಗಿ ಗಾಂಜಾ ಎಗ್ಗಿಲ್ಲದೆ ಪೂರೈಕೆಯಾಗುತ್ತಿದೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಗಾಂಜಾ ಮಾಫಿಯಾ ನಡೆಯುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈ ತನ್ನ ಒಣ ಪ್ರತಿಷ್ಟೆಯನ್ನು ಬಿಡದೆ ಜಿಲ್ಲೆಯಲ್ಲಿ ಗಾಂಜಾ ವ್ಯವಹಾರವೇ ಇಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ.ಪೋಲೀಸ್ ಇಲಾಖೆಯ ಮೂಲಗಳೇ ಜಿಲ್ಲೆಯಲ್ಲಿ ನಿರಂತರವಾಗಿ ಗಾಂಜಾದ ಆಮದು ಹಾಗೂ ರಫ್ತು ನಡೆಯುತ್ತಿದೆ ಎಂದು ಮಾಹಿತಿ ನೀಡುತ್ತಿದ್ದರೂ, ಉಸ್ತುವಾರಿ ಸಚಿವರು ಯಾವ ಆಧಾರದ ಮೇಲೆ ಗಾಂಜಾ ವ್ಯವಹಾರವೇ ಇಲ್ಲ, ನಿಯಂತ್ರಣದಲ್ಲಿದೆ ಎನ್ನುವುದನ್ನು ಹೇಳುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ.
ಪ್ರತಿಪಕ್ಷಗಳನ್ನು ಸಮಾಧಾನಪಡಿಸಲು ಇಂಥಹ ಹೇಳಿಕೆಗಳನ್ನು ನೀಡುತ್ತಿರುವ ಸಚಿವರಿಗೆ ಮುಗ್ದ ವಿದ್ಯಾರ್ಥಿಗಳು ಹಾಗೂ ಯುವಕರು ಗಾಂಜಾದ ದಾಸರಾಗುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೇ.
ಯುವಜನತೆಯ ಜೀವನದ ಮೇಲೆ ಚೆಲ್ಲಾಟವಾಡುವ ಗಾಂಜಾವನ್ನು ನಿಯಂತ್ರಿಸುವ ಬದಲು ಗಾಂಜಾ ವ್ಯವಹಾರವೇ ಇಲ್ಲ ಎನ್ನುವ ಉಸ್ತುವಾರಿಗಳ ಸಮರ್ಥನೆಯ ಹಿಂದಿನ ರಹಸ್ಯವೇನು ಎನ್ನುವುದು ತಿಳಿಯಬೇಕಿದೆ. ಗಾಂಜಾ ವ್ಯವಹಾರವನ್ನು ಮಟ್ಟಹಾಕಲು ಎಲ್ಲಾ ಪಕ್ಷಗಳೂ ತಮ್ಮ ಒಣ ಪ್ರತಿಷ್ಟೆಯನ್ನು ಬದಿಗಿಟ್ಟು ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ.